ಹೊಸದಿಗಂತ ವರದಿ ಕಲಬುರಗಿ:
ಪೋಕ್ಸೋ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಆರೋಪಿ ಪೊಲೀಸ್ ಠಾಣೆಯಿಂದ ಪರಾರಿಯಾಗಿದ್ದ ಘಟನೆಗೆ ಸಂಬಂಧಿಸಿದಂತೆ, ಅಪಜಲಪುರ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಮರುಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು,ಅಪಜಲಪುರ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 144/2026ರಡಿ ಪೋಕ್ಸೋ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣದಲ್ಲಿ ಆರೋಪಿಯಾಗಿರುವ ಮಂಜುನಾಥ ತಂದೆ ಶಿವಾನಂದ ಇಂಗಳೆ (23), ಈತನನ್ನು ಪೊಲೀಸರು ಪುಣೆಯಲ್ಲಿ ಪತ್ತೆ ಹಚ್ಚಿ ಠಾಣೆಗೆ ಕರೆತಂದು ವಿಚಾರಣೆಗೆ ಒಳಪಡಿಸಿದ್ದರು. ಆದರೆ, ಜುಲೈ 2ರಂದು ಪೊಲೀಸ್ ವಶದಲ್ಲಿದ್ದ ವೇಳೆ ಆತ ಠಾಣೆಯಿಂದ ಪರಾರಿಯಾಗಿದ್ದನು. ಈ ಸಂಬಂಧ ಗುನ್ನೆ ಸಂಖ್ಯೆ 154/2026ರಡಿ ಮತ್ತೊಂದು ಪ್ರಕರಣ ದಾಖಲಾಗಿದೆ ಎಂದರು.
ಇದನ್ನೂ ಓದಿ:
ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ಇಲಾಖೆ, ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಹೆಡ್ ಕಾನ್ಸ್ಟೇಬಲ್ ರವಿದಾಸ ಕಟ್ಟಿಮನಿ ಹಾಗೂ ಪೊಲೀಸ್ ಕಾನ್ಸ್ಟೇಬಲ್‌ಗಳಾದ ಪ್ರಶಾಂತ್ ಮತ್ತು ಶಿವಣ್ಣ ಅವರನ್ನು ಅಮಾನತುಗೊಳಿಸಿದೆ. ಅಲ್ಲದೆ ಅಪಜಲಪುರ ಸಿಪಿಐ ಲಕ್ಷಣ ಮಸಗುಪ್ಪಿ ಹಾಗೂ ಪಿಎಸ್‌ಐ ಸೋಮಲಿಂಗ ಒಡೆಯರ್ ಅವರಿಗೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದರು.
ಪರಾರಿಯಾಗಿದ್ದ ಆರೋಪಿಯನ್ನು ಪತ್ತೆಹಚ್ಚಲು ಸಿಪಿಐ ಹಾಗೂ ಪಿಎಸ್‌ಐ ನೇತೃತ್ವದಲ್ಲಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಕಾರ್ಯಾಚರಣೆ ನಡೆಸಿದ ತಂಡಗಳು ಜುಲೈ 3ರಂದು ತೆಲುಣಗಿ ಗ್ರಾಮದಲ್ಲಿ ಆರೋಪಿಯನ್ನು ಮರುಬಂಧನ ಮಾಡಿ ವಶಕ್ಕೆ ಪಡೆದಿವೆ.ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವನ್ನು ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಶಂಸಿಸಿದ್ದಾರೆ.



