ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಕಿಯಲ್ಲಿ ಸುಟ್ಟು ಕರಕಲಾದ ಯುವಕನ ಶವ ಪತ್ತೆಯಾಗಿರುವ ಘಟನೆ ಬೆಂಗಳೂರು ಹೊರವಲಯದಲ್ಲಿ ಸಂಚಲನ ಮೂಡಿಸಿದ್ದು, ಇದು ಅಪಘಾತವಲ್ಲ, ಕೊಲೆ ಇರಬಹುದೆಂಬ ಶಂಕೆ ಪೊಲೀಸರ ತನಿಖೆಗೆ ಹೊಸ ಆಯಾಮ ನೀಡಿದೆ.
ನಿರ್ಜನ ಪ್ರದೇಶದಲ್ಲಿ ಬೆಚ್ಚಿಬೀಳಿಸಿದ ದೃಶ್ಯ
ಆನೇಕಲ್ ಸಮೀಪದ ಸರ್ಜಾಪುರದ ಬಿಕ್ಕನಹಳ್ಳಿ ರಸ್ತೆಯ ಬಳಿ ಬೈಕ್ ಹಾಗೂ ಯುವಕನ ಶವ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತನನ್ನು ಆಂಧ್ರಪ್ರದೇಶದ ಗುಂಟೂರು ಮೂಲದ 26 ವರ್ಷದ ವಂಶಿಕೃಷ್ಣ ಎಂದು ಗುರುತಿಸಲಾಗಿದೆ. ಸ್ಥಳೀಯರು ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಹಾಗೂ ಶ್ವಾನದಳ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯ ಸಂಗ್ರಹಿಸಿದ್ದಾರೆ.
ಇದನ್ನೂ ಓದಿ:
ಕೊನೆಯ ಪ್ರಯಾಣವೇ ಸಾವಿನ ದಾರಿ?
ವಂಶಿಕೃಷ್ಣ ಎಲೆಕ್ಟ್ರಾನಿಕ್ ಸಿಟಿಯ ಪಿಜಿಯಲ್ಲಿ ವಾಸವಿದ್ದು, ಮಧ್ಯಾಹ್ನ ಸ್ನೇಹಿತನನ್ನು ಕರೆತರಲು ಬೈಕ್‌ನಲ್ಲಿ ಹೊರಟಿದ್ದ ಎನ್ನಲಾಗಿದೆ. ದಾರಿಯಲ್ಲಿ ಮತ್ತೊಬ್ಬ ಸ್ನೇಹಿತನಿಗೆ ಕರೆ ಮಾಡಿ ರಾತ್ರಿ ಭೇಟಿಯಾಗುವುದಾಗಿ ತಿಳಿಸಿದ್ದ. ಆದರೆ ಕೆಲವೇ ಹೊತ್ತಿನಲ್ಲಿ ಮೊಬೈಲ್ ಸಂಪರ್ಕ ಕಡಿತಗೊಂಡಿದ್ದು, ನಂತರ ಆತನ ಶವವೇ ಪತ್ತೆಯಾಗಿದೆ. ಬೈಕ್ ನೋಂದಣಿ ಸಂಖ್ಯೆಯ ಆಧಾರದ ಮೇಲೆ ಕುಟುಂಬಸ್ಥರನ್ನು ಪೊಲೀಸರು ಸಂಪರ್ಕಿಸಿ ಮೃತದೇಹವನ್ನು ಗುರುತಿಸಿದ್ದಾರೆ.
ಕೊಲೆ ಶಂಕೆ; ಹಲವು ಆಯಾಮಗಳಲ್ಲಿ ತನಿಖೆ
ಈ ಪ್ರಕರಣವನ್ನು ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣವಾಗಿ ದಾಖಲಿಸಲಾಗಿದೆ. ಮೊಬೈಲ್ ಕರೆಗಳ ವಿವರ, ಸಿಸಿಟಿವಿ ದೃಶ್ಯಗಳು ಹಾಗೂ ತಾಂತ್ರಿಕ ಸಾಕ್ಷ್ಯಗಳನ್ನು ಪರಿಶೀಲಿಸಿ ತನಿಖೆ ಮುಂದುವರಿದಿದೆ. ವಂಶಿಕೃಷ್ಣ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯಲ್ಲ ಎಂದು ಕುಟುಂಬಸ್ಥರು ಹೇಳಿದ್ದು, ಕೊಲೆ ನಡೆಸಿದವರನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಘಟನೆಗೆ ಕಾರಣವೇನು ಎಂಬುದು ಪೊಲೀಸರ ತನಿಖೆಯ ಬಳಿಕವೇ ಸ್ಪಷ್ಟವಾಗಲಿದೆ.



