ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈ ನಗರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಶನಿವಾರ ರಾತ್ರಿಯಿಡೀ ಸುರಿದ ಭೀಕರ ಧಾರಾಕಾರ ಮಳೆಯು ಮುಂಜಾನೆಯ ವೇಳೆಗೆ ಕೊಂಚ ಕಡಿಮೆಯಾಗಿದೆಯಾದರೂ, ಮುಂಬೈನಲ್ಲಿ ಮಳೆಯ ಆರ್ಭಟ ಮುಂದುವರಿಯಲಿದೆ. ಕೆಲವು ಕಡೆಗಳಲ್ಲಿ ಅತ್ಯಂತ ಭೀಕರ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಭಾರತೀಯ ಹವಾಮಾನ ಇಲಾಖೆ (IMD) ಭಾನುವಾರವೂ ನಗರಕ್ಕೆ ‘ರೆಡ್ ಅಲರ್ಟ್’ ವಿಸ್ತರಿಸಿದೆ
ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಬೃಹನ್ಮುಂಬೈ ಮಹಾನಗರ ಪಾಲಿಕೆ (BMC) ಸಾರ್ವಜನಿಕರು ತೀವ್ರ ಜಾಗರೂಕರಾಗಿರಬೇಕು ಮತ್ತು ಅತ್ಯಂತ ತುರ್ತು ಕೆಲಸಗಳಿದ್ದರೆ ಮಾತ್ರ ಮನೆಯಿಂದ ಹೊರಬರಬೇಕು ಎಂದು ಕಟ್ಟುನಿಟ್ಟಿನ ಮನವಿ ಮಾಡಿದೆ
ಕೆಲವು ಪ್ರದೇಶಗಳಲ್ಲಿ 300 ಮಿಮೀ ಮಳೆ ದಾಖಲು!
ಕಳೆದ 24 ಗಂಟೆಗಳಲ್ಲಿ ಮುಂಬೈನ ಹಲವು ಭಾಗಗಳಲ್ಲಿ 200 ಮಿಮೀಗಿಂತ ಹೆಚ್ಚು ಮತ್ತು ಕೆಲವು ಕಡೆಗಳಲ್ಲಿ ಬರೋಬ್ಬರಿ 300 ಮಿಮೀಗಿಂತಲೂ ಅಧಿಕ ದಾಖಲೆಯ ಮಳೆಯಾಗಿದೆ. ವಿಕ್ರೋಲಿ ವೆಸ್ಟ್ ಬಿಲ್ಡಿಂಗ್ ಪ್ರಪೋಸಲ್ ಆಫೀಸ್ ಗರಿಷ್ಠ 310.6 ಮಿಮೀ ಮಳೆ ದಾಖಲಾಗಿದೆ. ಕುಲಾಬಾ ಪಂಪಿಂಗ್ ಸ್ಟೇಷನ್ 306.6 ಮಿಮೀ ಮಳೆಯಾಗಿದ್ದು, ಇತರ ಪ್ರದೇಶಗಳಾದ ಮಲಬಾರ್ ಹಿಲ್, ಅಂಧೇರಿ ಫೈರ್ ಸ್ಟೇಷನ್, ಪಾವೈ, ಭಾಂಡೂಪ್, ಜೋಗೇಶ್ವರಿ ಮತ್ತು ಗೋರೆಗಾಂವ್ನ ಆರೆ ಕಾಲೋನಿಗಳಲ್ಲಿ 200 ಮಿಮೀಗಿಂತ ಹೆಚ್ಚು ಮಳೆ ಸುರಿದಿದೆ.
ಅರಬ್ಬಿ ಸಮುದ್ರದಲ್ಲಿ ರಾಕ್ಷಸ ಅಲೆಗಳ ಭೀತಿ
ಗಾಳಿಯು ಗಂಟೆಗೆ 55 ರಿಂದ 65 ಕಿ.ಮೀ ವೇಗದಲ್ಲಿ ಬೀಸಲಿದ್ದು, ತಗ್ಗು ಪ್ರದೇಶ ಮತ್ತು ಕರಾವಳಿ ತೀರದ ನಿವಾಸಿಗಳು ಎಚ್ಚರದಿಂದಿರಲು ಸೂಚಿಸಲಾಗಿದೆ. ಭೀಕರ ಸಮುದ್ರದ ಅಲೆಗಳು ಭಾನುವಾರ ಮಧ್ಯಾಹ್ನ 3:22 ಕ್ಕೆ 4.19 ಮೀಟರ್ ಎತ್ತರದ ಬೃಹತ್ ಅಲೆಗಳು ಏಳಲಿವೆ. ಹಾಗೆಯೇ ಸೋಮವಾರ ಮುಂಜಾನೆ 3:41 ಕ್ಕೆ 3.51 ಮೀಟರ್ ಎತ್ತರದ ಅಲೆಗಳು ಏಳುವ ಮುನ್ಸೂಚನೆ ಇದೆ.
ಸಾರಿಗೆ ಸಂಪರ್ಕದ ಪ್ರಸ್ತುತ ಸ್ಥಿತಿ
ಮುಂಬೈನ ಸೆಂಟ್ರಲ್ ಮತ್ತು ವೆಸ್ಟರ್ನ್ ರೈಲ್ವೆ ಮಾರ್ಗಗಳ ಹಳಿಗಳು ನೀರಿನಲ್ಲಿ ಮುಳುಗಿದ್ದರಿಂದ ಲೋಕಲ್ ರೈಲುಗಳು ಸದ್ಯ ವಿಳಂಬವಾಗಿ ಸಂಚರಿಸುತ್ತಿವೆ. ಮುಂಬೈ ಮೆಟ್ರೋ ಮತ್ತು ಬೆಸ್ಟ್ ಬಸ್ಗಳು ಮುಂಜಾನೆ ಎಂದಿನಂತೆ ಸಂಚಾರ ಆರಂಭಿಸಿವೆ.
ಇದನ್ನೂ ಓದಿ:
ನೆರೆಹೊರೆಯ ಜಿಲ್ಲೆಗಳಲ್ಲೂ ಹಾನಿ
ಶನಿವಾರ ಸುರಿದ ಪ್ರಳಯಸದೃಶ ಮಳೆಯಿಂದಾಗಿ ರಸ್ತೆ ಕುಸಿತ, ಮರಗಳು ಉರುಳುವುದು ಹಾಗೂ ಮನೆ ಕುಸಿತದಂತಹ ಘಟನೆಗಳು ನಡೆದಿವೆ ಮುಂಬೈ ಮಾತ್ರವಲ್ಲದೆ ನೆರೆಯ ಠಾಣೆ, ಪಾಲ್ಘರ್, ನವಿ ಮುಂಬೈ ಹಾಗೂ ಪುಣೆ ಪ್ರದೇಶಗಳಲ್ಲೂ ನಿರಂತರ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಪುಣೆ ಭಾಗದಲ್ಲಿ ಭೂಕುಸಿತ ಸಂಭವಿಸಿದ್ದು, ಪ್ರವಾಹ ಪೀಡಿತ ಪ್ರದೇಶಗಳಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.



