July 5, 2026
Sunday, July 5, 2026
spot_img

ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಿ: ಬೆಳೆಸಾಲ ಮನ್ನಾ ಮಾಡಲು ಸರ್ಕಾರಕ್ಕೆ ಮನವಿ

ಹೊಸದಿಗಂತ ವರದಿ ಚಿತ್ರದುರ್ಗ:

ಜಿಲ್ಲೆಯ ಡಿಸಿಸಿ ಬ್ಯಾಂಕ್‌ಗಳಲ್ಲಿ ರೈತರು ಪಡೆದಿರುವ ಅಲ್ಪಾವಧಿ ಬೆಳೆಸಾಲ ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಸಂಸದ ಗೋವಿಂದ ಕಾರಜೋಳ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರಲ್ಲಿ ಮನವಿ ಮಾಡಿದರು.

ಚಿತ್ರದುರ್ಗ ನಗರದ ಜಿ.ಪಂ. ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಪ್ರಕೃತಿ ವಿಕೋಪ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಿಲ್ಲೆಯ ಡಿಸಿಸಿ ಬ್ಯಾಂಕ್‌ಗಳಲ್ಲಿ ರೈತರು ಪಡೆದಿರುವ ಅಲ್ಪಾವಧಿ ಬೆಳೆಸಾಲ ಮನ್ನಾ ಮಾಡುವ ಮೂಲಕ ಸಂಕಷ್ಟದಲ್ಲಿರುವ ಸರ್ಕಾರ ರೈತರಿಗೆ ನೆರವಾಗಬೇಕು ಎಂದು ಒತ್ತಾಯಿಸಿದರು.

ಪ್ರಸಕ್ತ ಸಾಲಿನಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ಸುಮಾರು ೭೦,೦೦೦ ರೈತರಿಗೆ ಸಾಲ ನೀಡುವ ಗುರಿ ಹೊಂದಲಾಗಿತ್ತು. ಆದರೆ, ಇದುವರೆಗೆ ಕೇವಲ ೫,೦೦೦ ರೈತರಿಗೆ ಮಾತ್ರ ಸಾಲ ವಿತರಿಸಲಾಗಿದೆ. ರೈತರು ಬೆಳೆ ನಷ್ಟದಿಂದ ಕಂಗಾಲಾಗಿದ್ದಾರೆ. ಹೀಗಾಗಿ, ಬೆಳೆ ವಿಮೆಯ ನೂರರಷ್ಟು (೧೦೦%) ಪ್ರೀಮಿಯಂ ಕಂತನ್ನು ರಾಜ್ಯ ಸರ್ಕಾರವೇ ಭರಿಸಿ ರೈತರಿಗೆ ಆರ್ಥಿಕ ಅನುಕೂಲ ಮಾಡಿಕೊಡಬೇಕು ಎಂದರು.

ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು ೧೭ ಲಕ್ಷ ಕುರಿ ಮತ್ತು ಮೇಕೆಗಳು ಹಾಗೂ ೨.೫ ಲಕ್ಷ ದನಕರುಗಳಿವೆ. ಪ್ರಸ್ತುತ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗಿದೆ. ವಿಶೇಷವಾಗಿ ಮಧ್ಯ ಕರ್ನಾಟಕ ಭಾಗದಲ್ಲಿ ಕುರಿ ಸಾಕಾಣಿಕೆಯನ್ನು ಅವಲಂಬಿಸಿರುವ ಶೇ. ೯೦ ರಷ್ಟು ಜನರು ಹಿಂದುಳಿದ ಮತ್ತು ಕಾಡುಗೊಲ್ಲ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇವರ ಜೀವನೋಪಾಯಕ್ಕಾಗಿ ಜಾನುವಾರುಗಳಿಗೆ ಉಚಿತವಾಗಿ ಮೇವು ಮತ್ತು ನೀರಿನ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಬೇಕು ಎಂದು ಸಂಸದ ಗೋವಿಂದ ಕಾರಜೋಳ ವಿನಂತಿ ಮಾಡಿಕೊಂಡರು.

ವಿ.ವಿ. ಸಾಗರ ಜಲಾಶಯದಿಂದ ನೀರು ತುಂಬಿಸಲು ಮನವಿ:

ಮಳೆಯನ್ನೇ ನಂಬಿಕೊಂಡಿರುವ ಮೊಳಕಾಲ್ಮೂರು ತಾಲೂಕಿನ ಕೆರೆಗಳಿಗೆ ನೀರು ಒದಗಿಸಲು ಇರುವ ಏಕೈಕ ಮಾರ್ಗ ಜಲಾಶಯಗಳು. ಸದ್ಯ ವಿವಿ ಸಾಗರ ಜಲಾಶಯದಲ್ಲಿ ಶೇಕಡಾ ೩೦ ರಷ್ಟು ನೀರಿದ್ದು, ಅಲ್ಲಿಂದ ಮೊಳಕಾಲ್ಮೂರು ತಾಲೂಕಿನ ಪಕ್ಕದಲ್ಲಿರುವ ಕೆರೆಗಳಿಗೆ ನೀರು ಹರಿಸಲು ಅವಕಾಶ ಮಾಡಿಕೊಡಬೇಕು ಎಂದು ಶಾಸಕ ಎನ್.ವೈ.ಗೋಪಾಕೃಷ್ಣ ಮನವಿ ಮಾಡಿದರು.

ಮುಂದಿನ ೨-೩ ತಿಂಗಳ ನಿರ್ವಹಣೆ:

ಕೆರೆಗಳಿಗೆ ನೀರು ತುಂಬಿಸಿದರೆ ಅಲ್ಲಿಂದ ಬೋರ್‌ವೆಲ್‌ಗಳ ಮೂಲಕ ಕುಡಿಯುವ ನೀರು ಒದಗಿಸಲು ಸಾಧ್ಯವಾಗುತ್ತದೆ. ಮುಂದಿನ ಎರಡು ಮೂರು ತಿಂಗಳುಗಳ ಕಾಲ ಪರಿಸ್ಥಿತಿಯನ್ನು ನಿರ್ವಹಣೆ ಮಾಡಲು ಸರ್ಕಾರ ತಕ್ಷಣವೇ ಸೂಕ್ತ ಆದೇಶ ಹಾಗೂ ಅನುಮತಿ ನೀಡಬೇಕು. ಇದರಿಂದ ಮೊಳಕಾಲ್ಮೂರು ಕ್ಷೇತ್ರ ವ್ಯಾಪ್ತಿಯಲ್ಲಿ ಉದ್ಭವಿಸಬಹುದಾದ ಯಾವುದೇ ಕುಡಿಯುವ ನೀರಿನ ಸಮಸ್ಯೆಯನ್ನು ಯಶಸ್ವಿಯಾಗಿ ತಡೆಗಟ್ಟಬಹುದು ಎಂದು ಅವರು ಸಭೆಯಲ್ಲಿ ಒತ್ತಾಯಿಸಿದರು.

ಇದನ್ನೂ ಓದಿ:

ಶಾಸಕ ಡಾ. ಎಂ. ಚಂದ್ರಪ್ಪ ಹೊಳಲ್ಕೆರೆ ತಾಲ್ಲೂಕು ಮಲೆನಾಡು ಭಾಗಕ್ಕೆ ಹೊಂದಿಕೊಂಡಿದ್ದರೂ ಸಹ, ಈ ಬಾರಿ ತೀವ್ರ ಬರಗಾಲದ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ತಾಲ್ಲೂಕನ್ನು ಸಂಪೂರ್ಣ ಬರಪೀಡಿತ ಪ್ರದೇಶವೆಂದು ಘೋಷಿಸಲಾಗಿದೆ. ತಾಲ್ಲೂಕಿನಲ್ಲಿ ಶೇ. ೪೫ ಕ್ಕಿಂತಲೂ ಹೆಚ್ಚು ಮಳೆ ಕೊರತೆಯಾಗಿದೆ. ಕಳೆದ ನಾಲ್ಕು ತಿಂಗಳುಗಳಿಂದ ಕುಡಿಯುವ ನೀರಿಗಾಗಿ ಬೋರ್‌ವೆಲ್‌ಗಳನ್ನೇ ಆಶ್ರಯಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಸಾರ್ವಜನಿಕರ ನೀರಿನ ಅಗತ್ಯವನ್ನು ಪೂರೈಸಲು ಈಗಾಗಲೇ ೧೨೭ ಬೋರ್‌ವೆಲ್‌ಗಳನ್ನು ಕೊರೆಸಲಾಗಿದ್ದು, ಆ ಪೈಕಿ ಸುಮಾರು ೨೮ ರಿಂದ ೨೯ ಬೋರ್‌ವೆಲ್‌ಗಳು ವಿಫಲವಾಗಿವೆ ಅಧಿಕಾರಿಗಳು ಅನುದಾನದ ಕೊರತೆಯನ್ನು ಹೇಳುತ್ತಿದ್ದರೂ, ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಈ ಕ್ರಮ ಅನಿವಾರ್ಯವಾಗಿತ್ತು. ಇದಕ್ಕಾಗಿ ಸುಮಾರು ೧.೫೦ ಕೋಟಿ ರೂಪಾಯಿಗಳ ವೆಚ್ಚದ ಪ್ರಸ್ತಾವನೆ ಬಾಕಿ ಉಳಿದಿದೆ. ಮುಂಬರುವ ತಿಂಗಳುಗಳಲ್ಲಿ ಮಳೆಯಾಗದಿದ್ದರೆ ಪರಿಸ್ಥಿತಿ ಇನ್ನಷ್ಟು ಕೈಮೀರಲಿದೆ.

ಆದ್ದರಿಂದ ಸರ್ಕಾರವು ತಕ್ಷಣವೇ ಮಧ್ಯಪ್ರವೇಶಿಸಿ, ಬಾಕಿ ಇರುವ ಬೋರ್‌ವೆಲ್ ಬಿಲ್ಲುಗಳ ಹಣವನ್ನು ಬಿಡುಗಡೆ ಮಾಡಬೇಕು ಮತ್ತು ಕುಡಿಯುವ ನೀರಿನ ಸಮಸ್ಯೆಗೆ ಸಮರ್ಪಕ ಪರಿಹಾರ ಕಲ್ಪಿಸಬೇಕು ಎಂದು ಮನವಿ ಮಾಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !