ಹೊಸದಿಗಂತ ವರದಿ ಉತ್ತರಕನ್ನಡ :
ಅಂಕೋಲಾ ತಾಲೂಕಿನಲ್ಲಿ ಭಾರೀ ವೇಗದಲ್ಲಿ ಬಿರುಗಾಳಿ ಬೀಸುತ್ತಿದ್ದು ಗಾಳಿಯ ವೇಗದಿಂದ ಸಮುದ್ರದ ಅಲೆಗಳು ಉಕ್ಕೇರಿವೆ ಬೃಹತ್ ಗಾತ್ರದ ಅಲೆಗಳು ಕಡಲ ತೀರಕ್ಕೆ ಬಂದು ಅಪ್ಪಳಿಸುತ್ತಿದ್ದು ಕಡಲ ತೀರದ ನಿವಾಸಿಗಳು ಭಯಭೀತರಾಗಿದ್ದಾರೆ.
ಹಾರವಾಡದ ತರಂಗಮೇಟ ಕಡಲ ತೀರದಲ್ಲಿ ಕಡಲ ಕೊರೆತ ಹೆಚ್ಚಾಗಿದ್ದು ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಮುಂಜಾಗ್ರತಾ ಕ್ರಮವಾಗಿ ಜನ ವಾಸ್ತವ್ಯ ಇರುವ ಒಂದು ಮನೆಯನ್ನು ಖಾಲಿ ಮಾಡಿಸಿದ್ದಾರೆ.
ಕಡಲ ಕೊರೆತದ ಭೀತಿಯಿಂದ ಬೇರೆ ಕಡೆ ಸ್ಥಳಾಂತರಗೊಂಡಿರುವ ನಿವಾಸಿಯೊಬ್ಬರ ಮನೆಯ ಹಿಂಬದಿಯಲ್ಲಿರುವ ಶೌಚಾಲಯಕ್ಕೆ ಕಡಲ ಅಲೆಗಳ ಹೊಡೆತದಿಂದ ಹಾನಿ ಸಂಭವಿಸಿದೆ. ಹಲವಾರು ತೆಂಗಿನ ಮರಗಳು ಕಡಲ ಕೊರೆತದಿಂದ ಬುಡಸಮೇತ ಕಿತ್ತು ಬಿದ್ದು ಸಮುದ್ರದ ಒಡಲು ಸೇರಿವೆ.
ಇದನ್ನೂ ಓದಿ:
ಕಡಲ ಕೊರೆತ ವ್ಯಾಪಕವಾಗಿ ಜನವಸತಿ ಪ್ರದೇಶದಲ್ಲಿ ಕಡಲ ಅಲೆಗಳು ನುಗ್ಗುತ್ತಿದ್ದು ಮುಂಜಾಗ್ರತಾ ಕ್ರಮವಾಗಿ ಕಡಲ ತೀರದ ನಿವಾಸಿಗಳು ಬೇರೆ ಕಡೆಗಳಲ್ಲಿ ಆಶ್ರಯ ಪಡೆದಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು ಶನಿವಾರ ತರಂಗಮೇಟ ಕಡಲ ತೀರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತೆರಳಿದ್ದರು.
ಶನಿವಾರ ಸಂಜೆಯಿಂದ ಸಮುದ್ರ ತೀರದ ಕಡೆಯಿಂದ ಭಾರೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಕಡಲ ಕೊರೆತದ ತೀವ್ರತೆ ಹೆಚ್ಚಾಗಿದ್ದು ಸ್ಥಳೀಯರಲ್ಲಿ ಭೀತಿ ಹುಟ್ಟಿಸಿದೆ.



