ಹೊಸದಿಗಂತ ಡಿಜಿಟಲ್ ಡೆಸ್ಕ್:
2026ರ ಮೈಸೂರು ದಸರಾ ಮಹೋತ್ಸವಕ್ಕೆ ಗಜಪಡೆ ಆಯ್ಕೆ ಪ್ರಕ್ರಿಯೆಗೆ ಅಧಿಕೃತ ಚಾಲನೆ ಸಿಕ್ಕಿದ್ದು, ಇದೇ ಮೊದಲ ಬಾರಿಗೆ ಆನೆಗಳಿಗೆ ಇಸಿಜಿ ಮಾಡಿಸಲಾಗುತ್ತಿದೆ.
ಕೊಡಗಿನ ಮತ್ತಿಗೋಡು ಮತ್ತು ದುಬಾರೆ ಆನೆ ಶಿಬಿರಗಳಲ್ಲಿ ಪಶುವೈದ್ಯರ ತಂಡ ಆನೆಗಳ ಸಮಗ್ರ ಆರೋಗ್ಯ ತಪಾಸಣೆ ನಡೆಸಿದ್ದು, ಈ ಬಾರಿ ಮೊದಲ ಬಾರಿಗೆ ಇಸಿಜಿ ಪರೀಕ್ಷೆಯನ್ನೂ ಮಾಡಲಾಗಿದೆ.
20ಕ್ಕೂ ಅಧಿಕ ಆನೆಗಳ ಆರೋಗ್ಯ ತಪಾಸಣೆ ನಡೆಸಿದ್ದು, ಆನೆಗಳ ರಕ್ತ ಮತ್ತು ಮಲದ ಮಾದರಿಗಳನ್ನು ಸಂಗ್ರಹಿಸಿ ವಿವಿಧ ಪ್ರಯೋಗಾಲಯಗಳಿಗೆ ಪರೀಕ್ಷೆಗಾಗಿ ರವಾನಿಸಲಾಗಿದೆ. ಜೊತೆಗೆ ಹೆಣ್ಣಾನೆಗಳಿಗೆ ಅಲ್ಟ್ರಾಸೌಂಡ್ ಮೂಲಕ ಗರ್ಭಧಾರಣೆ ಪರೀಕ್ಷೆಯನ್ನೂ ನಡೆಸಲಾಗಿದೆ.
ವೈದ್ಯಕೀಯ ವರದಿ ಬಂದ ನಂತರ ಆನೆಗಳನ್ನು ಆಯ್ಕೆ ಮಾಡಿ ತಾತ್ಕಾಲಿಕ ಪಟ್ಟಿ ಮಾಡಿ ರಾಜ್ಯಮಟ್ಟದ ಸಮಿತಿಗೆ ನೀಡಲಾಗುತ್ತದೆ. ಈ ಬಾರಿ ಜಯದಶಮಿ ಹಬ್ಬ 20 ದಿನ ತಡವಾಗಿ ನಡೆಯುತ್ತಿರುವ ಹಿನ್ನೆಲೆ, ದಸರಾ ಗಜಪಡೆ ಆಯ್ಕೆ ಪ್ರಕ್ರಿಯೆಯೂ ವಿಳಂಬವಾಗಿ ಆರಂಭವಾಗಿದೆ.



