ಹೊಸದಿಗಂತ ವರದಿ ಬೀದರ್
ಬೀದರ್: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಬೀದರ್ ಜಿಲ್ಲೆಗೆ ಆಗಮಿಸುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕವು ಜಿಲ್ಲೆಯ ರೈತರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸಿದಂತೆ ಮನವಿ ಸಲ್ಲಿಸಿದ್ದಾರೆ.
ಮನವಿಯಲ್ಲಿ ಜಿಲ್ಲೆಯ ರೈತರು ಕಳೆದ ಹಲವು ವರ್ಷಗಳಿಂದ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಆತ್ಮಹತ್ಯೆ ಹಾಗೂ ವಲಸೆ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ. ಜಿಲ್ಲೆಯ ಸುಮಾರು 85 ಶೇಕಡಾ ಕೃಷಿ ಮಳೆಯಾಶ್ರಿತವಾಗಿರುವುದರಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಕಳೆದ ಸಾಲಿನಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿದ್ದು, ಈ ವರ್ಷ ಅನಾವೃಷ್ಟಿಯಿಂದ ಬಿತ್ತನೆ ಸಂಪೂರ್ಣ ಕುಂಠಿತಗೊಂಡಿದೆ. ರೈತರು ಸಾಲ ಮಾಡಿ ಬೀಜ ಹಾಗೂ ಗೊಬ್ಬರ ಖರೀದಿಸಿ ಮಳೆಯ ನಿರೀಕ್ಷೆಯಲ್ಲಿ ಇದ್ದು, ಜಿಲ್ಲೆಯನ್ನು ತಕ್ಷಣ ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಲಾಗಿದೆ.
ಕಳೆದ ಸಾಲಿನಲ್ಲಿ ತೊಗರಿ ಬೆಳೆ ವಿಮೆ ಪಾವತಿಸಿದ ರೈತರಿಗೆ ಕೆಲ ತಾಲೂಕುಗಳಲ್ಲಿ ಮಾತ್ರ ವಿಮೆ ಪರಿಹಾರ ದೊರೆತಿದ್ದು, ಉಳಿದ ತಾಲೂಕುಗಳ ರೈತರಿಗೆ ಪರಿಹಾರ ದೊರೆತಿಲ್ಲ. ಈ ಕುರಿತು ತನಿಖೆ ನಡೆಸಿ ಅರ್ಹ ರೈತರಿಗೆ ತಕ್ಷಣ ವಿಮೆ ಪರಿಹಾರ ವಿತರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಜಿಲ್ಲೆಯ ಏಕೈಕ ಹಳೆಯ ಬಿ.ಎಸ್.ಎಸ್.ಕೆ. ಸಕ್ಕರೆ ಕಾರ್ಖಾನೆ ಹಾಗೂ ಉಳಿದ ಎರಡು ಸಹಕಾರಿ ಸಕ್ಕರೆ ಕಾರ್ಖಾನೆಗಳು ಸಾಲದ ಸಂಕಷ್ಟದಲ್ಲಿರುವುದರಿAದ ಒನ್ ಟೈಮ್ ಸೆಟಲ್‌ಮೆಂಟ್ (ಒಟಿಎಸ್) ಮೂಲಕ ಸಾಲ ಮನ್ನಾ ಮಾಡಿ ಕಾರ್ಖಾನೆಗಳನ್ನು ಸದೃಢಗೊಳಿಸಬೇಕು. ಬರುವ ಹಂಗಾಮಿನಲ್ಲಿ ಬಿ.ಎಸ್.ಎಸ್.ಕೆ. ಕಾರ್ಖಾನೆಯನ್ನು ಗುತ್ತಿಗೆ ಆಧಾರದ ಮೇಲೆ ಪುನರಾರಂಭಿಸಬೇಕು ಎಂದು ಮನವಿ ಮಾಡಲಾಗಿದೆ.
ಬಚಾವತ್ ಆಯೋಗದ ಶಿಫಾರಸಿನಂತೆ ಗೋದಾವರಿ ಜಲಾನಯನ ಪ್ರದೇಶದ 20 ಟಿಎಂಸಿ ನೀರಿನ ಬಳಕೆಗಾಗಿ ₹1,000 ಕೋಟಿ ಅನುದಾನ ಮೀಸಲಿಟ್ಟು ಜಿಲ್ಲೆಯ ಶಾಶ್ವತ ಬರ ಪರಿಹಾರ ಯೋಜನೆ ಜಾರಿಗೊಳಿಸಬೇಕು ಎಂದು ರೈತ ಸಂಘ ಒತ್ತಾಯಿಸಿದ್ದಾರೆ.
ಹೊಲ, ತೋಟದ ಮನೆಗಳು ಹಾಗೂ ದನದ ಕೊಟ್ಟಿಗೆಗಳಿಗೆ ಸಿಂಗಲ್ ಫೇಸ್ ವಿದ್ಯುತ್ ಸಂಪರ್ಕ ನೀಡುವ ಸರ್ಕಾರದ ಘೋಷಣೆಯನ್ನು ತಕ್ಷಣ ಜಾರಿಗೊಳಿಸಬೇಕು. ಕಾರಂಜಾ ಜಲಾಶಯದಿಂದ ಭೂಮಿ ಕಳೆದುಕೊಂಡ ರೈತರಿಗೆ ತ್ವರಿತವಾಗಿ ಸಮರ್ಪಕ ಪರಿಹಾರ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಇದನ್ನೂ ಓದಿ:
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿರಾದಾರ ಸಂಗಮಕರ, ಸಂಘಟನಾ ಕಾರ್ಯದರ್ಶಿ ಸಂತೋಷ ಗುದಗೆ, ಬೀದರ್ ತಾಲೂಕು ಅಧ್ಯಕ್ಷ ರಾಜಕುಮಾರ ಸ್ವಾಮಿ, ಶಾಂತಮ್ಮ ಮುಲಗೆ,ಸುಮನ ಗ್ರಾಮಲೆ, ಅಶೋಕ್ ಕುಲಕರ್ಣಿ, ವ್ಹಿ.ಕೆ.ದೇಶಪಾಂಡೆ,ಶಿವರಾಯ ಮುಧಾಳೆ, ಖಾಶಿಮ್ ಅಲಿ, ನಾಗಶೆಟ್ಟಪ್ಪ ಲಂಜವಾಡೆ, ವಿಠಲರಾವ ಮೆತ್ರೆ, ಅನ್ನಪೂರ್ಣೇಶ್ವರಿ ಬಿರಾದಾರ, ವಿಠಲರೆಡ್ಡಿ ಅಣದೂರ, ಬಸವರಾಜ ಅಷ್ಟೂರ, ಧೂಳಪ್ಪ ಸೊರಳಿ, ವಿಶ್ವನಾಥ ಧರಣೆ, ರುದ್ರಯ್ಯ ಸ್ವಾಮಿ, ಸನ್ಮುಖಪ್ಪ ಅಣದೂರ, ಭವರಾವ ನೆಲವಾಡೆ, ಮುಖಿಮೊದ್ದೀನ್ ಪಟೇಲ್ (ನಂದಗಾಂವ), ವಿಜಯಕುಮಾರ ಬಾವಗಿ ಹಾಗೂ ವಿರಾರೆಡ್ಡಿ ಪಾಟೀಲ (ಖಾನಸಾಬ್ ಬಿಕೆ) ಸೇರಿದಂತೆ ಹಲವರು ಇದ್ದರು.



