July 8, 2026
Wednesday, July 8, 2026
spot_img

ದೂರಾದ ಬರಗಾಲದ ಭೀತಿ: ರಾಜ್ಯಾದ್ಯಂತ ಮೋಡ ಬಿತ್ತನೆಗೆ ಸಚಿವ ಸತೀಶ್ ಜಾರಕಿಹೊಳಿ ಒತ್ತಾಯ!

ಹೊಸದಿಗಂತ ವರದಿ ಬೆಳಗಾವಿ:

ಬೆಳಗಾವಿ: ರಾಜ್ಯದಲ್ಲಿ ಎದುರಾಗಿದ್ದ ಬರಗಾಲದ ಭೀತಿ ಸದ್ಯಕ್ಕೆ ದೂರವಾಗಿದ್ದು, ವರುಣನ ಕೃಪೆ ಮುಂದುವರಿದಿದೆ. ಜಲಾಶಯಗಳಿಗೆ ಒಳಹರಿವು ಗಣನೀಯವಾಗಿ ಹೆಚ್ಚಾಗಿದೆ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.  ಇದೇ ವೇಳೆ ಹಾವೇರಿಯಲ್ಲಿ ನಡೆದ ಮೋಡ ಬಿತ್ತನೆ ಯಶಸ್ವಿಯಾಗಿದ್ದು, ಮುಂಬರುವ ದಿನಗಳಲ್ಲಿ ಇದನ್ನು ರಾಜ್ಯಾದ್ಯಂತ ವಿಸ್ತರಿಸುವಂತೆ ಮುಖ್ಯಮಂತ್ರಿಗಳಿಗೆ ಒತ್ತಾಯಿಸುವುದಾಗಿ ತಿಳಿಸಿದರು.

ಮಂಗಳವಾರ ಬೆಳಗಾವಿ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು ಎಂಬ ಆತಂಕವಿತ್ತು. ಆದರೆ ಕಳೆದ ಎರಡು-ಮೂರು ದಿನಗಳಲ್ಲಿ ಮಳೆ ದಿಕ್ಕು ಬದಲಿಸಿದ್ದು, ಕರ್ನಾಟಕದಲ್ಲಿ ಸಂತೋಷದ ವಾತಾವರಣ ನಿರ್ಮಾಣವಾಗಿದೆ. ಕೃಷ್ಣಾ, ಮಲಪ್ರಭಾ, ಹಿರಣ್ಯಕೇಶಿ ನದಿಗಳು ತುಂಬಿ ಹರಿಯುತ್ತಿದ್ದು, ಬಾಗಲಕೋಟೆವರೆಗೂ ಕಾಲುವೆ ನೀರು ತಲುಪಿದೆ. ಸೇತುವೆಗಳು ಮುಳುಗಡೆಯಾಗುತ್ತಿರುವುದು ಹೊಸದೇನಲ್ಲ, ಮುಂಜಾಗ್ರತೆಯಾಗಿ ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ ಎಂದರು. 

ಮೋಡ ಬಿತ್ತನೆ ಯಶಸ್ವಿ ರಾಜ್ಯಾದ್ಯಂತ ವಿಸ್ತರಣೆಗೆ ಮನವಿ:

ಹಾವೇರಿಯಲ್ಲಿ ಕೈಗೊಳ್ಳಲಾದ ಮೋಡ ಬಿತ್ತನೆ ಪ್ರಕ್ರಿಯೆ ಯಶಸ್ವಿಯಾಗಿದ್ದು, ಅಲ್ಲಿ ಉತ್ತಮ ಮಳೆಯಾಗಿದೆ ಎಂದು ಸಾರ್ವಜನಿಕರು ಪ್ರತಿಕ್ರಿಯಿಸಿದ್ದಾರೆ. ಈ ಯಶಸ್ಸಿನ ಹಿನ್ನೆಲೆಯಲ್ಲಿ, ಮುಂಬರುವ ದಿನಗಳಲ್ಲಿ ಇಡೀ ರಾಜ್ಯಾದ್ಯಂತ ಅಗತ್ಯವಿರುವ ಕಡೆಗಳಲ್ಲಿ ಮೋಡ ಬಿತ್ತನೆ ಕಾರ್ಯವನ್ನು ಹಮ್ಮಿಕೊಳ್ಳುವಂತೆ ಮುಖ್ಯಮಂತ್ರಿಗಳಿಗೆ ವಿಶೇಷ ಒತ್ತಾಯ ಮತ್ತು ಮನವಿ ಮಾಡುತ್ತೇನೆ ಎಂದು ತಿಳಿಸಿದರು. 

ಶೀಘ್ರದಲ್ಲೇ ಸಂಪುಟ ವಿಸ್ತರಣೆ ನಿರೀಕ್ಷೆ :

ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ ಅವರು,  “ಸಂಪುಟ ವಿಸ್ತರಣೆ ಪ್ರಕ್ರಿಯೆಯು ಆದಷ್ಟು ಬೇಗ ನಡೆಯಬೇಕೆಂಬುದು ನಮ್ಮ ಆಶಯವಾಗಿದೆ. ಈ ಕುರಿತು ಈಗಾಗಲೇ ನಾವು ಹೈಕಮಾಂಡ್ ಮತ್ತು ನಾಯಕರಿಗೆ ತಿಳಿಸಿದ್ದೇವೆ. ಸದ್ಯದಲ್ಲೇ ಒಳ್ಳೆಯ ನಿರ್ಧಾರ ಹೊರಬೀಳುವ ನಿರೀಕ್ಷೆಯಿದ್ದು, ಅಲ್ಲಿಯವರೆಗೆ ಕಾಯೋಣ” ಎಂದರು.

ಇದನ್ನೂ ಓದಿ:

ಆರ್ ಎಸ್ ಎಸ್ ಬೈಠಕ್ ಹಾಗೂ ಪಥಸಂಚಲನ ವಿವಾದ:

ಬೆಳಗಾವಿಯಲ್ಲಿ ನಡೆಯುತ್ತಿರುವ ಆರ್ ಎಸ್ ಎಸ್ ಬೈಠಕ್ ಕುರಿತು ಮಾತನಾಡಿದ ಅವರು, ಸಂಘಟನೆಗೆ ಅಗತ್ಯವಿರುವ ಎಲ್ಲಾ ರೀತಿಯ ಮೂಲಸೌಕರ್ಯ ಹಾಗೂ ಭದ್ರತಾ ವ್ಯವಸ್ಥೆಯನ್ನು ಜಿಲ್ಲಾಡಳಿತ ಮತ್ತು ಪೊಲೀಸರು ಕಲ್ಪಿಸಿಕೊಟ್ಟಿದ್ದಾರೆ. ಇದರಲ್ಲಿ ಯಾವುದೇ ರಾಜಕೀಯ ಅಜೆಂಡಾ ಇಲ್ಲ ಎಂದು ಅವರೇ ಹೇಳುತ್ತಿರುತ್ತಾರೆ ಎಂದರು.

ಇದೇ ವೇಳೆ, “ಪಥಸಂಚಲನಕ್ಕೆ ಅನುಮತಿ ಕಡ್ಡಾಯ” ಎಂಬ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಜಾರಕಿಹೊಳಿ, “ಅದು ಅವರ ಇಲಾಖೆಗೆ ಸಂಬಂಧಿಸಿದ್ದಾಗಿದ್ದು, ಗೃಹ ಸಚಿವರು ಅದನ್ನು ನಿಭಾಯಿಸಲಿದ್ದಾರೆ” ಎಂದು ಸ್ಪಷ್ಟಪಡಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !