September 17, 2026
Thursday, September 17, 2026
spot_img

ಭೀಕರ ಗುಡ್ಡ ಕುಸಿತಕ್ಕೆ ವಯನಾಡು ತತ್ತರ: ಐವರಿಗಾಗಿ ರಕ್ಷಣಾ ಪಡೆಯಿಂದ ತೀವ್ರ ಹುಡುಕಾಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳದ ವಯನಾಡಿನ ಮೆಪ್ಪಾಡಿ ಎಂಬಲ್ಲಿ ಭಾರಿ ಮಳೆಯ ನಡುವೆಯೂ ರಕ್ಷಣಾ ಕಾರ್ಯಾಚರಣೆ ಚುರುಕಿನಿಂದ ಸಾಗುತ್ತಿದೆ. ಸುರಂಗ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಜಾಗದಲ್ಲಿ ಸಂಭವಿಸಿದ ಭೀಕರ ಗುಡ್ಡ ಕುಸಿತದಿಂದಾಗಿ ಮೂವರು ಕಾರ್ಮಿಕರು ದುರಂತ ಅಂತ್ಯ ಕಂಡಿದ್ದಾರೆ. ಸದ್ಯ ನಾಪತ್ತೆಯಾಗಿರುವ ಮತ್ತ ಐದು ಜನರಿಗಾಗಿ ಶೋಧ ಕಾರ್ಯ ತೀವ್ರಗೊಂಡಿದೆ. ಆದರೆ, ಎಡೆಬಿಡದೆ ಸುರಿಯುತ್ತಿರುವ ಮಳೆಯು ರಕ್ಷಣಾ ಸಿಬ್ಬಂದಿಯ ಕಾರ್ಯಾಚರಣೆಗೆ ತೀವ್ರ ಅಡ್ಡಿ ಉಂಟುಮಾಡುತ್ತಿದೆ.

ಸುನಾಮಿಯಂತೆ ನುಗ್ಗಿದ ಕೆಸರು: ಧ್ವಂಸಗೊಂಡ ಕಾಮಗಾರಿ ಸ್ಥಳ

ಮೆಪ್ಪಾಡಿ ಬಳಿಯ ಸುರಂಗ ರಸ್ತೆ ಕೆಲಸವು ವೇಗವಾಗಿ ನಡೆಯುತ್ತಿದ್ದಾಗ, ಹಠಾತ್ತಾಗಿ ಬೃಹತ್ ಗಾತ್ರದ ಬೆಟ್ಟ ಕುಸಿದು ಬಿದ್ದಿದೆ. ಸುನಾಮಿಯಂತೆ ಭೋರ್ಗರೆದು ಬಂದ ಕೆಸರು ಮತ್ತು ಮಣ್ಣಿನ ಆರ್ಭಟಕ್ಕೆ ಇಡೀ ಕಾಮಗಾರಿ ಪ್ರದೇಶವು ಕ್ಷಣಾರ್ಧದಲ್ಲಿ ಸಂಪೂರ್ಣ ನಾಶವಾಗಿದೆ. ಟನ್‌ಗಟ್ಟಲೆ ಮಣ್ಣಿನ ರಾಶಿಯ ಅಡಿಯಲ್ಲಿ ಅಲ್ಲಿ ಕೆಲಸ ಮಾಡುತ್ತಿದ್ದ ಶ್ರಮಿಕರು, ಬೃಹತ್ ಯಂತ್ರೋಪಕರಣಗಳು ಹಾಗೂ ವಾಹನಗಳು ಹೂತುಹೋಗಿವೆ. ಸದ್ಯ ಮಣ್ಣಿನ ಅವಶೇಷಗಳೊಳಗಿಂದ ಮೂರು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಉಳಿದವರಿಗಾಗಿ ಹುಡುಕಾಟ ಮುಂದುವರಿದಿದೆ.

ಸಮಯ ಪ್ರಜ್ಞೆಯಿಂದ ಪಾರಾದ ಸ್ಥಳೀಯರು

ಗುಡ್ಡ ಕುಸಿತದ ಭೀಕರ ರಭಸಕ್ಕೆ ಕಾಮಗಾರಿ ಸ್ಥಳದ ಸುತ್ತಮುತ್ತಲಿನ ಹಲವು ಮನೆಗಳು ನೆಲಸಮವಾಗಿವೆ. ಆದರೆ, ಅಪಾಯದ ಮುನ್ಸೂಚನೆ ಅರಿತ ಸ್ಥಳೀಯ ನಿವಾಸಿಗಳು ತಕ್ಷಣವೇ ಸುರಕ್ಷಿತ ಪ್ರದೇಶಗಳಿಗೆ ಓಡಿಹೋಗಿದ್ದಾರೆ. ಜನ ಸಮಯ ಪ್ರಜ್ಞೆ ಮೆರೆದಿದ್ದರಿಂದಾಗಿ ನೂರಾರು ಜೀವಗಳು ದೊಡ್ಡ ಮಟ್ಟದ ಪ್ರಾಣಾಪಾಯದಿಂದ ಪಾರಾಗಿವೆ. ಸದ್ಯ ಮಣ್ಣು ಕುಸಿಯುತ್ತಿರುವ ಸವಾಲಿನ ನಡುವೆಯೂ ರಕ್ಷಣಾ ಪಡೆಗಳು ಕಾರ್ಯಾಚರಣೆಯಲ್ಲಿ ನಿರತವಾಗಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !