ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ದೆಹಲಿಯಲ್ಲಿ ಸುರಿಯುತ್ತಿರುವ ಮಳೆಯ ಮಧ್ಯೆಯೇ ಭೀಕರ ಅಪಘಾತವೊಂದು ಸಂಭವಿಸಿದೆ. ನವದೆಹಲಿಯ ರೋಹಿಣಿ ಸೆಕ್ಟರ್ 16ರ ಎಂಸಿಡಿ (MCD) ಶಾಲೆ ಎದುರು ನಿರ್ಮಾಣ ಹಂತದಲ್ಲಿದ್ದ ನಾಲ್ಕು ಅಂತಸ್ತಿನ ವಸತಿ ಕಟ್ಟಡವೊಂದು ಬುಧವಾರ ಸಂಜೆ ಹಠಾತ್ತನೆ ಧರಾಶಾಹಿಯಾಗಿದೆ. ಕಟ್ಟಡದ ಅವಶೇಷಗಳ ಅಡಿಯಲ್ಲಿ ಕನಿಷ್ಠ 8 ಜನರು ಸಿಲುಕಿಕೊಂಡಿದ್ದಾರೆ ಎಂದು ಅಂದಾಜಿಸಲಾಗಿದ್ದು, ಸ್ಥಳದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ:
ಕಟ್ಟಡ ಕುಸಿಯುತ್ತಿದ್ದಂತೆ ಜೋರಾದ ಶಬ್ದ ಕೇಳಿ ಸ್ಥಳೀಯ ನಿವಾಸಿಗಳು ತಕ್ಷಣವೇ ಧಾವಿಸಿ ಬಂದು ತಮ್ಮ ಬರಿಗೈಯಿಂದಲೇ ಇಟ್ಟಿಗೆ ಹಾಗೂ ಕಬ್ಬಿಣದ ಕಂಬಗಳನ್ನು ಸರಿಸಿ ಜನರನ್ನು ರಕ್ಷಿಸಲು ಮುಂದಾದರು. ವಿಷಯ ತಿಳಿಯುತ್ತಿದ್ದಂತೆ ದೆಹಲಿ ಅಗ್ನಿಶಾಮಕ ದಳದ (DFS) 4 ವಾಹನಗಳು, ಪೊಲೀಸರು ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಸ್ಥಳಕ್ಕೆ ದೌಡಾಯಿಸಿವೆ. ಜೆಸಿಬಿ ಸೇರಿದಂತೆ ಭಾರೀ ಯಂತ್ರೋಪಕರಣಗಳನ್ನು ಬಳಸಿ ಕಾಂಕ್ರೀಟ್ ಸ್ಲ್ಯಾಬ್ಗಳನ್ನು ತೆರವುಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ.
ಇದನ್ನೂ ಓದಿ:
ಅಧಿಕಾರಿಗಳ ಮಾಹಿತಿ:
“ಕಟ್ಟಡ ಕುಸಿದಿರುವ ಬಗ್ಗೆ ಸಂಜೆ 4:19ಕ್ಕೆ ನಮಗೆ ಕರೆ ಬಂದಿತು. ತಕ್ಷಣ ರಕ್ಷಣಾ ತಂಡಗಳನ್ನು ರವಾನಿಸಲಾಗಿದೆ. ಅವಶೇಷಗಳ ನಡುವೆ ಸಿಲುಕಿರುವವರನ್ನು ಸಂಪರ್ಕಿಸಲು ಸಣ್ಣ ರಂಧ್ರಗಳ ಮೂಲಕ ಪ್ರಯತ್ನಿಸಲಾಗುತ್ತಿದೆ. ಕಾರ್ಯಾಚರಣೆ ಮುಗಿಯುವವರೆಗೂ ನಿಖರವಾದ ಸಂಖ್ಯೆಯನ್ನು ಹೇಳಲು ಸಾಧ್ಯವಿಲ್ಲ” ಎಂದು ದೆಹಲಿ ಅಗ್ನಿಶಾಮಕ ದಳದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.



