ಹೊಸದಿಗಂತ ಡಿಜಿಟಲ್ ಡೆಸ್ಕ್:
2026ರ ಫಿಫಾ ವಿಶ್ವಕಪ್‌ನ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಮೆರಿಕ ಪುರುಷರ ಫುಟ್‌ಬಾಲ್ ತಂಡವು ಬೆಲ್ಜಿಯಂ ವಿರುದ್ಧ 4-1 ಗೋಲುಗಳಿಂದ ಸೋತು ಟೂರ್ನಿಯಿಂದ ಹೊರಬಿದ್ದಿದೆ. ಆದರೆ, ಈ ಸೋಲಿನ ನಡುವೆಯೂ ತಂಡಕ್ಕೆ ಬರೋಬ್ಬರಿ 16 ಮಿಲಿಯನ್ ಡಾಲರ್ (ಸುಮಾರು ₹152 ಕೋಟಿ) ಬೃಹತ್ ಮೊತ್ತದ ಬಹುಮಾನ ಲಭಿಸಿದೆ. ವಿಶೇಷವೆಂದರೆ, ಈ ಪ್ರಶಸ್ತಿ ಹಣದ ಅರ್ಧದಷ್ಟು ಭಾಗವು ಅಮೆರಿಕದ ಮಹಿಳಾ ಫುಟ್‌ಬಾಲ್ ತಂಡದ ಖಾತೆಗೆ ಸೇರಲಿದೆ!
ಕ್ರೀಡಾ ಲೋಕದಲ್ಲಿ ಸಮಾನತೆ ತಂದ ಐತಿಹಾಸಿಕ ‘CBA’ ಒಪ್ಪಂದ
ಪಂದ್ಯ ಆಡದೆಯೇ ಮಹಿಳಾ ಆಟಗಾರ್ತಿಯರಿಗೆ ಕೋಟ್ಯಂತರ ರೂಪಾಯಿ ಹಣ ಸಿಗುತ್ತಿರುವುದಕ್ಕೆ ಯುಎಸ್ ಸಾಕರ್ ಫೆಡರೇಶನ್ ಜಾರಿಗೆ ತಂದಿರುವ ವಿಶೇಷ ನಿಯಮವೇ ಕಾರಣ. 2022ರಲ್ಲಿ ಅಮೆರಿಕದ ಮಹಿಳಾ ತಂಡವು ಲಿಂಗ ತಾರತಮ್ಯದ ವಿರುದ್ಧ ದೊಡ್ಡ ಕಾನೂನು ಹೋರಾಟ ನಡೆಸಿತ್ತು. ಇದರ ಫಲವಾಗಿ ಪುರುಷ ಮತ್ತು ಮಹಿಳಾ ತಂಡಗಳ ನಡುವೆ ‘ಕಲೆಕ್ಟಿವ್ ಬಾರ್ಗೇನಿಂಗ್ ಅಗ್ರಿಮೆಂಟ್’ (CBA) ಒಪ್ಪಂದ ಏರ್ಪಟ್ಟಿತು. ಇದರ ಅನ್ವಯ ವಿಶ್ವಕಪ್‌ನಲ್ಲಿ ಯಾರು ಗೆದ್ದರೂ ಬಹುಮಾನದ ಹಣವನ್ನು ಇಬ್ಬರಿಗೂ ಸಮಾನವಾಗಿ ಹಂಚಬೇಕು.
ಕೋಟಿ ಕೋಟಿ ಹಣ ಯಾರಿಗೆ ಎಷ್ಟು ಸಿಗಲಿದೆ? ವಿಂಗಡಣೆ ಹೀಗಿದೆ:
ವಿಶ್ವಕಪ್‌ನಿಂದ ಬಂದ ಒಟ್ಟು ₹152 ಕೋಟಿಯಲ್ಲಿ ಶೇ. 20 ರಷ್ಟು (ಸುಮಾರು ₹30 ಕೋಟಿ) ಹಣವು ಯುಎಸ್ ಸಾಕರ್ ಫೆಡರೇಶನ್ ಖಾತೆಗೆ ಹೋಗುತ್ತದೆ. ಉಳಿದ ಶೇ. 80 ರಷ್ಟು (ಸುಮಾರು ₹122 ಕೋಟಿ) ಹಣವನ್ನು ಆಟಗಾರರಿಗೆ ಹಂಚಲಾಗುತ್ತದೆ. ಇದರಲ್ಲಿ ಪುರುಷರ ತಂಡಕ್ಕೆ ಶೇ. 40 (₹61 ಕೋಟಿ) ಹಾಗೂ ಮಹಿಳಾ ತಂಡಕ್ಕೆ ಶೇ. 40 (₹61 ಕೋಟಿ) ಸಿಗಲಿದೆ.
ಇದರಿಂದಾಗಿ ಪುರುಷರ ತಂಡದ 26 ಆಟಗಾರರು ಮತ್ತು ಮುಂಬರುವ 2027ರ ವಿಶ್ವಕಪ್‌ಗೆ ಆಯ್ಕೆಯಾಗಲಿರುವ 26 ಮಹಿಳಾ ಆಟಗಾರ್ತಿಯರು ತಲಾ ₹2.3 ಕೋಟಿಗೂ ಅಧಿಕ ಹಣವನ್ನು ಪ್ರಶಸ್ತಿ ರೂಪದಲ್ಲಿ ಪಡೆಯಲಿದ್ದಾರೆ.



