July 9, 2026
Thursday, July 9, 2026
spot_img

45 ಕೋಟಿ ರೂ. ಬಜೆಟ್ ಇದ್ದರೂ ಶುರುವಾಗದ ಕಾಮಗಾರಿ: ಸಚಿವರ ಹಸ್ತಕ್ಷೇಪ ಕೋರಿದ ಸಂಸದ ಸೂರ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಪಾದಚಾರಿ ರಸ್ತೆಗಳ ಒತ್ತುವರಿ ತೆರವಿಗೆ ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಮುಂದಾಗಿರುವ ಬೆನ್ನಲ್ಲೇ, ಬನಶಂಕರಿಯ ಬಹುಕಾಲದ ಸ್ಕೈವಾಕ್ ಯೋಜನೆ ಜಾರಿಗೆ ತರುವಂತೆ ಸಂಸದ ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ. ಬಿ-ಸ್ಮೈಲ್ ಫ್ಲೈಓವರ್‌ಗಾಗಿ ಈ ಅಗತ್ಯ ಸ್ಕೈವಾಕ್ ಯೋಜನೆಯನ್ನು ಕೈಬಿಡಬಾರದು ಎಂದು ಒತ್ತಾಯಿಸಿ ಅವರು ಸಚಿವರಿಗೆ ಪತ್ರ ಬರೆದಿದ್ದಾರೆ.

ಪಾದಚಾರಿಗಳ ಸುರಕ್ಷತೆಗೆ ಆತಂಕ

ಕೆಲ ವಾರಗಳ ಹಿಂದೆ ಬನಶಂಕರಿಯಲ್ಲಿ ರಸ್ತೆ ದಾಟುವಾಗ ವೃದ್ಧೆಯೊಬ್ಬರು ಅಪಘಾತದಲ್ಲಿ ಮೃತಪಟ್ಟ ಘಟನೆಯನ್ನು ತೇಜಸ್ವಿ ಸೂರ್ಯ ನೆನಪಿಸಿದ್ದಾರೆ. “ಸೂಕ್ತ ಪಾದಚಾರಿ ಮೂಲಸೌಕರ್ಯವಿದ್ದರೆ ಈ ದುರಂತ ತಡೆಯಬಹುದಿತ್ತು. ಕಳೆದ 7 ವರ್ಷಗಳಿಂದ ಈ ವೃತ್ತಾಕಾರದ ಸ್ಕೈವಾಕ್ ವಿನ್ಯಾಸಕ್ಕಾಗಿ ನಿರಂತರ ಹೋರಾಟ ನಡೆಸಲಾಗುತ್ತಿದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.

₹45 ಕೋಟಿ ಮಂಜೂರಾದರೂ ಶುರುವಾಗದ ಕಾಮಗಾರಿ

“ಬಿಬಿಎಂಪಿ ಬಜೆಟ್‌ನಲ್ಲಿ ₹45 ಕೋಟಿ ಅನುದಾನ ಸಿಕ್ಕಿ, ಶಂಕುಸ್ಥಾಪನೆಯಾಗಿದ್ದರೂ ಕಾಮಗಾರಿ ಇನ್ನು ಆರಂಭವಾಗಿಲ್ಲ” ಎಂದು ಸಂಸದರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಮೆಟ್ರೋ ನಿಲ್ದಾಣ, ಟಿಟಿಎಂಸಿ ಬಸ್ ನಿಲ್ದಾಣ, ಮಾರುಕಟ್ಟೆ ಹಾಗೂ ದೇವಸ್ಥಾನಗಳಿಗೆ ಸುರಕ್ಷಿತ ಸಂಪರ್ಕ ಕಲ್ಪಿಸಲು ಈ ಸ್ಕೈವಾಕ್ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಸಚಿವರು ವೈಯಕ್ತಿಕವಾಗಿ ಮಧ್ಯಪ್ರವೇಶಿಸಿ, ಯೋಜನೆಯನ್ನು ಆದಷ್ಟು ಬೇಗ ಸಾಕಾರಗೊಳಿಸಬೇಕೆಂದು ಪತ್ರದಲ್ಲಿ ವಿನಂತಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !