August 25, 2026
Tuesday, August 25, 2026
spot_img

25 ವರ್ಷಗಳ ಹಿಂದೆ ಪಡೆದ ಸಾಲ ತೀರಿಸೋಕೆ ಕೇರಳದಿಂದ ತೆಲಂಗಾಣಕ್ಕೆ ಬಂದ ಸ್ನೇಹಿತ! ಇದು ರಿಯಲ್‌ ಸ್ಟೋರಿ

ಸಾಲ ಕೊಟ್ಟವರು, ಸಾಲ ಪಡೆದವರನ್ನು ಹುಡುಕಿಕೊಂಡು ಓಡಾಡಬೇಕು. ನೂರು ಸಲ ಫೋನ್‌ ಮಾಡಬೇಕು, ಮನೆ ಹತ್ರ ಹೋಗಿ ನೋಡಬೇಕು. ಎಲ್ಲೂ ಸಿಕ್ಕಿಲ್ಲ ಅಂದ್ರೆ ಪೊಲೀಸ್‌ ಠಾಣೆ ಮೆಟ್ಟಿಲು ಹತ್ತಬೇಕು. ಆದರೆ ಇಲ್ಲಿ ಸಾಲ ಪಡೆದಾತನೇ ಅದನ್ನು ತೀರಿಸಬೇಕೆಂದು ಊರಿಂದೂರಿಗೆ ಅಲೆದಾಡಿದ್ದಾರೆ.

ಈ ಅಪರೂಪದ ಘಟನೆ ನಡೆದಿರೋದು ತೆಲಂಗಾಣದ ಜಗ್ತಿಯಾಲ್‌ ಜಿಲ್ಲೆಯ ಧರ್ಮಪುರಿಯಲ್ಲಿ. ಬರೋಬ್ಬರಿ 25 ವರ್ಷಗಳ ಹಿಂದೆ ತಾನು ಪಡೆದಿದ್ದ ಸಾಲವನ್ನು ನೆನಪಿನಲ್ಲಿಟ್ಟುಕೊಂಡು, ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಸಾವಿರಾರು ಕಿಲೋಮೀಟರ್ ದೂರ ಪ್ರಯಾಣ ಬೆಳೆಸಿ ಬಂದವರು ಕೇರಳಂನ ಪಾಲಕ್ಕಾಡ್‌ ಮೂಲದ ಮೊಹಮ್ಮದ್‌ ಇಸ್ಮಾಯಿಲ್‌.

ಹಲವು ವರ್ಷಗಳ ಹಿಂದೆ ಎಡ್ಲಾ ಲಚ್ಚಣ್ಣ ಹಾಗೂ ಇಸ್ಮಾಯಿಲ್‌ ಸೌದಿ ಅರೇಬಿಯಾದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆ ಸಮಯ ಇಸ್ಮಾಯಿಲ್‌ ಅವರಿಗೆ ತುರ್ತು ಹಣದ ಅವಶ್ಯಕತೆ ಇತ್ತು. ಗೆಳೆಯ ಲಚ್ಚಣ್ಣ 25,೦೦೦ ರೂ. ಹಣ ನೀಡಿದ್ದರು. ಭಾರತಕ್ಕೆ ಬಂದ ನಂತರ ನಿನ್ನ ಸಾಲ ತೀರಿಸುತ್ತೇನೆ ಎಂದು ಇಸ್ಮಾಯಿಲ್‌ ಮಾತುಕೊಟ್ಟಿದ್ದರು.

ಇದಾದ ನಂತರ ಇಬ್ಬರೂ ಭಾರತಕ್ಕೆ ವಾಪಾಸಾದರು. ಅವರವರ ಊರಿನಲ್ಲಿ ವಾಸವಿದ್ದರು. ಫೋನ್‌ ನಂಬರ್‌, ವಿಳಾಸ ಎಲ್ಲವೂ ಬದಲಾಗಿತ್ತು. ಇಸ್ಮಾಯಿಲ್‌ಗೆ ಲಚ್ಚಣ್ಣ ಎಲ್ಲಿದ್ದಾರೆ ಎನ್ನುವುದೂ ಗೊತ್ತಿರಲಿಲ್ಲ. ಇತ್ತ ಲಚ್ಚಣ್ಣ ತಾನು ಕೊಟ್ಟ ಸಾಲವನ್ನು ಮರೆತೇಹೋಗಿದ್ದರು. ಎಷ್ಟೇ ಸಮಯ ಕಳೆದರೂ ನನ್ನ ಗೆಳೆಯನಿಗೆ ಹಣ ಕೊಡೋದಕ್ಕೆ ಸಾಧ್ಯವಾಗ್ತಿಲ್ಲ ಎನ್ನುವ ನೋವು ಇಸ್ಮಾಯಿಲ್‌ ಅವರಿಗೆ ಕಾಡ್ತಾ ಇತ್ತು. ಒಂದು ದಿನ ಇದ್ದಕ್ಕಿದ್ದಂತೆಯೇ ಜೇಬಿನಲ್ಲಿ 25,೦೦೦ ರೂಪಾಯಿ ಇಟ್ಟುಕೊಂಡು ಇಸ್ಮಾಯಿಲ್‌ ಬಸ್‌ ಹತ್ತಿದ್ದರು.

ಲಚ್ಚಣ್ಣನ ಫೋನ್‌ ನಂಬರ್‌ ಇಲ್ಲ, ಬದುಕಿದ್ದಾರೋ ಇಲ್ಲವೋ ಗೊತ್ತಿಲ್ಲ, ವಿಳಾಸ ಇಲ್ಲ. ಆದರೆ ಲಚ್ಚಣ್ಣನ ಊರು ಧರ್ಮಪುರಿ ಎನ್ನುವುದನ್ನು ಇಸ್ಮಾಯಿಲ್‌ ನೆನಪಿನಲ್ಲಿ ಇಟ್ಟುಕೊಂಡಿದ್ದರು. ಗೂಗಲ್‌ ಮ್ಯಾಪ್‌ ಹಾಕಿಕೊಂಡು ಕೇರಳದಿಂದ ಸಾವಿರಾರು ಕಿಲೋಮೀಟರ್ ಪ್ರಯಾಣ ಬೆಳೆಸಿ ಜಗ್ತಿಯಾಲ್ ಜಿಲ್ಲೆಯ ಧರ್ಮಪುರಿ ಪಟ್ಟಣ ತಲುಪಿದರು. ಅಲ್ಲಿ ಸ್ಥಳೀಯರ ಜೊತೆ ಮಾತನಾಡುತ್ತಾ ಲಚ್ಚಣ್ಣನ ಮನೆಯನ್ನು ಹುಡುಕಿದ್ದಾರೆ.

ಹತ್ತಾರು ಜನರನ್ನು ಕೇಳಿದ ನಂತರ ಕಡೆಗೆ ಲಚ್ಚಣ್ಣನ ಮನೆ ಸಿಕ್ಕಿತು. ಮನೆಯ ಕದ ತಟ್ಟಿದ ಇಸ್ಮಾಯಿಲ್‌ ಅವರಿಗೆ ಗೆಳೆಯನನ್ನು ಕಣ್ತುಂಬ ನೋಡಿ ಕೈಗೆ ಹಣ ಕೊಟ್ಟುಬಿಡಬೇಕು ಎನಿಸುತ್ತಿತ್ತು. ಬಾಗಿಲು ತೆಗೆದಾಗ ಲಚ್ಚಣ್ಣ ಊರಲ್ಲಿಲ್ಲ, ಕೆಲಸಕ್ಕಾಗಿ ಮತ್ತೆ ಸೌದಿಗೆ ಹೋಗಿರುವುದು ತಿಳಿಯಿತು. ಮನೆಯವರಿಗೆ ತಮ್ಮ ಪರಿಚಯ, ಕಥೆ ತಿಳಿಸಿ ಲಚ್ಚಣ್ಣನನ್ನು ಫೋನ್‌ ಮೂಲಕ ಸಂಪರ್ಕಿಸಲಾಯಿತು.

ಸಾಲ ಕೊಟ್ಟಿದ್ದನ್ನೇ ಮರೆತು ಹೋಗಿದ್ದ ಲಚ್ಚಣ್ಣ ಇಸ್ಮಾಯಿಲ್‌ ಕರೆಯಿಂದ ಆಶ್ಚರ್ಯಪಟ್ಟರು. ನಿಮ್ಮ ಋಣದ ಭಾರ ನನ್ನ ಮೇಲಿತ್ತು. ಮತ್ತೆ ನಿಮ್ಮ ಬಳಿ ಬರಲು ಇಷ್ಟು ಸಮಯವಾಯ್ತು ಕ್ಷಮಿಸಿ ಎಂದು ಇಸ್ಮಾಯಿಲ್‌ ಹೇಳಿದರು. ಲಚ್ಚಣ್ಣನ ದನಿಯೂ ಗದ್ಗದಿತವಾಗಿತ್ತು. ತಂದೆಗೆ ಇಂಥ ಒಳ್ಳೆ ಸ್ನೇಹಿತರಿದ್ದಾರೆ ಎಂದು ಲಚ್ಚಣ್ಣನ ಮಕ್ಕಳು ಖುಷಿಪಟ್ಟರು. ಲಚ್ಚಣ್ಣನ ಯೋಗಕ್ಷೇಮ ವಿಚಾರಿಸಿ ಅವರ ನಂಬರ್‌ ತೆಗೆದುಕೊಂಡ ಇಸ್ಮಾಯಿಲ್‌, ಕುಟುಂಬದವರಿಗೆ ಸಾಲದ ಹಣವನ್ನು ನೀಡಿ ಕೈ ಮುಗಿದರು.

ಈಗಿನ ಕಾಲದಲ್ಲಿಯೂ ಇಂತಹ ಸ್ನೇಹ, ನಿಷ್ಕಲ್ಮಶ ಪ್ರೀತಿಯನ್ನು ಕಂಡು ಇಡೀ ಊರೇ ಖುಷಿಪಟ್ಟಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !