July 11, 2026
Saturday, July 11, 2026
spot_img

ಸುಖದ ಸೋಪಾನ, ಕ್ಷಮಯಾ ಧರಿತ್ರಿ ಕಾದಂಬರಿಗಳ ಕತ್ರೃ, ಖ್ಯಾತ ಸಾಹಿತಿ ಸಿ.ಎನ್. ಮುಕ್ತಾ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಖ್ಯಾತ ಸಾಹಿತಿ, ಕಾದಂಬರಿಗಾರ್ತಿ ಸಿ.ಎನ್‌. ಮುಕ್ತಾ ಅವರಿ ನಿನ್ನೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ಪಾರ್ಥಿವ ಶರೀರವನ್ನು ಮೈಸೂರಿನ ಲಕ್ಷ್ಮೀಪುರಂನ ಆರ್‌ಟಿಒ ವೃತ್ತದ ಸಮೀಪದ ಡಬಲ್ ಟ್ಯಾಂಕ್ ರಸ್ತೆಯಲ್ಲಿರುವ ನಿವಾಸದಲ್ಲಿ ಸಾರ್ವಜನಿಕರ ಅಂತಿಮ ದರುಶನಕ್ಕೆ ಇರಿಸಲಾಗಿತ್ತು.

ಅವಿವಾಹಿತರಾಗಿದ್ದ ಮುಕ್ತಾ ಅವರು ಸಹೋದರ ಮತ್ತು ಸಹೋದರಿಯನ್ನು ಅಗಲಿದ್ದಾರೆ. 25 ವರ್ಷಗಳಿಗೂ ಹೆಚ್ಚು ಕಾಲ ರಾಜ್ಯದ ವಿವಿಧ ಸರ್ಕಾರಿ ಪ್ರೌಢಶಾಲೆಗಳಲ್ಲಿ ಇಂಗ್ಲಿಷ್ ಶಿಕ್ಷಕಿಯಾಗಿ, ನಂತರ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ ಅವರು ಸ್ವಯಂ ನಿವೃತ್ತಿ ಪಡೆದಿದ್ದರು.

ಆಶ್ರಯ ಅವರ ಮೊದಲ ಕಾದಂಬರಿಯಾಗಿದ್ದು, ಅದೇ ಅವರ ವಿಶಿಷ್ಟ ಸಾಹಿತ್ಯ ಪಯಣಕ್ಕೆ ನಾಂದಿ ಹಾಡಿತು. ನಂತರ ಅನಾವರಣ, ಅಪರಿಚಿತರು, ಜೀವನ ಚಕ್ರ, ಅಮೃತಮಯಿ ಸೇರಿದಂತೆ 75ಕ್ಕೂ ಹೆಚ್ಚು ಕಾದಂಬರಿಗಳು ಹಾಗೂ ಕಥಾಸಂಕಲನಗಳನ್ನು ರಚಿಸಿದರು. ಅವರ ಅನೇಕ ಕೃತಿಗಳು ಜನಪ್ರಿಯ ಕನ್ನಡ ವಾರಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡು ಅಪಾರ ಓದುಗರನ್ನು ಸಂಪಾದಿಸಿದ್ದವು.

ಸುಖದ ಸೋಪಾನ, ಕ್ಷಮಯಾ ಧರಿತ್ರಿ, ದಡ ಸೇರಿದ ನೌಕೆ, ಜೀವನಚಕ್ರ, ಅಮೃತಮಯಿ, ವಿಮುಕ್ತಿ ಸೇರಿದಂತೆ ಅವರ ಹಲವು ಕಾದಂಬರಿಗಳು ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನ ಪಡೆದಿವೆ.

ಅವರ ಸುಖದ ಸೋಪಾನ ಹಾಗೂ ಕ್ಷಮಯಾ ಧರಿತ್ರಿ ಕಾದಂಬರಿಗಳು ದೂರದರ್ಶನ ಧಾರಾವಾಹಿಗಳಾಗಿಯೂ ರೂಪಾಂತರಗೊಂಡಿದ್ದವು. ಜೊತೆಗೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ದೋಣಿ ಸಾಗಲಿ ಹಾಗೂ ನಿರ್ದೇಶಕ ಕೊಡ್ಲು ರಾಮಕೃಷ್ಣ ಅವರ ಮಿಸ್ ಕ್ಯಾಲಿಫೋರ್ನಿಯಾ ಚಿತ್ರಗಳಿಗೆ ಕಥೆಯನ್ನೂ ಬರೆದಿದ್ದರು.

ಅವರ ಕಾದಂಬರಿಗಳು ರಾಜ್ಯದ ಪ್ರಮುಖ ವಾರಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡು ಅಪಾರ ಜನಪ್ರಿಯತೆ ಗಳಿಸಿದ್ದವು. 75ಕ್ಕೂ ಹೆಚ್ಚು ಕಾದಂಬರಿಗಳು ಹಾಗೂ 15ಕ್ಕೂ ಅಧಿಕ ಕಥಾಸಂಕಲನಗಳನ್ನು ರಚಿಸಿರುವ ಮುಕ್ತಾ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಅತ್ತಿಮಬ್ಬೆ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಸಂದಿದ್ದವು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !