ಹೊಸದಿಗಂತ ಡಿಜಿಟಲ್ ಡೆಸ್ಕ್:
ಅರ್ಜೆಂಟೀನಾ ಫುಟ್‌ಬಾಲ್ ಅಸೋಸಿಯೇಷನ್ (AFA) ಈಗ ಅಮೆರಿಕಾದ ನ್ಯಾಯಾಂಗ ಇಲಾಖೆ ಹಾಗೂ ಎಫ್‌ಬಿಐ (FBI) ತನಿಖೆಯ ಬಲೆಯಲ್ಲಿ ಸಿಲುಕಿದೆ. ಕೋಟ್ಯಂತರ ಡಾಲರ್ ಮನಿ ಲಾಂಡ್ರಿಂಗ್ ಮತ್ತು ಆರ್ಥಿಕ ವಂಚನೆ ಆರೋಪಗಳು ಸಂಸ್ಥೆಯ ವಿರುದ್ಧ ಕೇಳಿಬಂದಿವೆ.
ಫ್ಲೋರಿಡಾ ನಂಟು ಮತ್ತು ಶಂಕಾಸ್ಪದ ವರ್ಗಾವಣೆ
ಜಾಗತಿಕ ಪ್ರಸಾರ ಮತ್ತು ಪ್ರಾಯೋಜಕತ್ವದ ಹಕ್ಕುಗಳ ಮೂಲಕ ಬಂದ ಸುಮಾರು 260 ಮಿಲಿಯನ್ ಡಾಲರ್ ಹಣವನ್ನು ಫ್ಲೋರಿಡಾದ ‘ಟೂರ್ ಪ್ರೊಡ್ ಎಂಟರ್’ ಎಂಬ ಶೆಲ್ ಕಂಪನಿಯ ಮೂಲಕ ಚಲಾವಣೆ ಮಾಡಲಾಗಿದೆ. ಇದರಲ್ಲಿ ಯಾವುದೇ ಬಲವಾದ ಆಧಾರವಿಲ್ಲದೆ 57 ಮಿಲಿಯನ್ ಡಾಲರ್‌ಗೂ ಅಧಿಕ ಹಣವನ್ನು ಇತರೆ ಖಾತೆಗಳಿಗೆ ವರ್ಗಾಯಿಸಿರುವುದು ತನಿಖಾ ಸಂಸ್ಥೆಗಳ ಕಣ್ಣು ಕೆಂಪಗಾಗಿಸಿದೆ.
ಬಡವರ ಹೆಸರಲ್ಲಿ ಕಪ್ಪು ಹಣ ಬಿಳಿ?
ವರದಿಗಳ ಪ್ರಕಾರ, ಅರ್ಜೆಂಟೀನಾದ ಸಾಮಾಜಿಕ ಕಲ್ಯಾಣ ಯೋಜನೆಗಳ ಫಲಾನುಭವಿಗಳಾದ ಅತ್ಯಂತ ನಿರ್ಗತಿಕರ ಹೆಸರಿನಲ್ಲಿ ನಕಲಿ ಕಂಪನಿಗಳನ್ನು ಸೃಷ್ಟಿಸಿ, ಈ ಅಕ್ರಮ ಹಣವನ್ನು ವರ್ಗಾಯಿಸಲಾಗಿದೆ. ಕಪ್ಪು ಹಣವನ್ನು ಕಾನೂನುಬದ್ಧಗೊಳಿಸಲು ಈ ಮಾರ್ಗ ಬಳಸಲಾಗಿದೆ ಎಂದು ಶಂಕಿಸಲಾಗಿದೆ. ಈ ಹಣದಲ್ಲಿ 16.5 ಮಿಲಿಯನ್ ಡಾಲರ್ ಮೊತ್ತವನ್ನು ಐಷಾರಾಮಿ ವಸ್ತುಗಳ ಖರೀದಿಗೆ ಬಳಸಲಾಗಿದ್ದು, ಉನ್ನತಾಧಿಕಾರಿಯೊಬ್ಬರ ಆಧ್ಯಾತ್ಮಿಕ ಗುರುವಿನ ಕುಟುಂಬಕ್ಕೆ 3,40,000 ಡಾಲರ್ ಅಕ್ರಮವಾಗಿ ಸಂದಾಯವಾಗಿದೆ.
ಟಾಪಿಯಾಗೆ ರಾಜಕೀಯ ಮತ್ತು ಕಾನೂನು ಸಂಕಷ್ಟ
AFA ಅಧ್ಯಕ್ಷ ಕ್ಲಾಡಿಯೊ “ಚಿಕಿ” ಟಾಪಿಯಾ ಈಗಾಗಲೇ ಅಲ್ಲಿನ ಅಧ್ಯಕ್ಷ ಜೇವಿಯರ್ ಮೈಲಿ ಸರ್ಕಾರದೊಂದಿಗೆ ರಾಜಕೀಯ ವೈಷಮ್ಯ ಹೊಂದಿದ್ದು, ಈಗ ಎಫ್‌ಬಿಐ ತನಿಖೆ ಅವರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದರ ಬೆನ್ನಲ್ಲೇ ದೇಶೀಯ ತೆರಿಗೆ ಇಲಾಖೆಯೂ ಪ್ರಾಯೋಜಕತ್ವದ ಸಂಸ್ಥೆಗಳ ಮೇಲೆ ದಾಳಿ ನಡೆಸಿದೆ. ಸದ್ಯಕ್ಕೆ ಕ್ರೀಡಾ ಉದ್ಯಮಿಗಳ ವಿಚಾರಣೆ ನಡೆಯುತ್ತಿದ್ದು, ಯಾರ ಮೇಲೂ ಅಧಿಕೃತ ಕ್ರಿಮಿನಲ್ ಕೇಸ್ ದಾಖಲಾಗಿಲ್ಲ.



