July 12, 2026
Sunday, July 12, 2026
spot_img

ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮೇಘಸ್ಫೋಟ: ಹಠಾತ್ ಪ್ರವಾಹಕ್ಕೆ ಹೊಟೇಲ್ ಗಳು ಜಲಾವೃತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಮ್ಮು ಮತ್ತು ಕಾಶ್ಮೀರದ ಪ್ರಸಿದ್ಧ ಪ್ರವಾಸಿ ತಾಣವಾದ ಪಹಲ್ಗಾಮ್‌ನಲ್ಲಿ ಶನಿವಾರ ಸಂಜೆ ಸಂಭವಿಸಿದ ಭೀಕರ ಮೇಘಸ್ಫೋಟವು ಹಠಾತ್ ಪ್ರವಾಹಕ್ಕೆ ಕಾರಣವಾಗಿದೆ. ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಅವೂರಾ ಹಾಗೂ ದೆವಾತು ಅರಣ್ಯ ವಲಯಗಳಿಗೂ ಈ ಪ್ರವಾಹದ ನೀರು ನುಗ್ಗಿದ್ದು, ಪರಿಸ್ಥಿತಿ ಗಂಭೀರವಾಗಿದೆ. ಶನಿವಾರ ಸಂಜೆ 6:00 ರಿಂದ ರಾತ್ರಿ 9:30 ರವರೆಗೆ ಸುರಿದ ಜಿಟಿಜಿಟಿ ಮಳೆಯು ರಾತ್ರಿ 8:00 ರ ಸುಮಾರಿಗೆ ವಿಕೋಪಕ್ಕೆ ತಿರುಗಿತು. ಇದರಿಂದಾಗಿ ಸ್ಥಳೀಯ ನಿವಾಸಿಗಳು ಹಾಗೂ ಪ್ರವಾಸಿಗರು ಆತಂಕಕ್ಕೆ ಒಳಗಾಗಿದ್ದಾರೆ.

ಹೊಟೇಲ್ ಗಳಿಗೆ ನುಗ್ಗಿದ ನೀರು: ರಕ್ಷಣಾ ಕಾರ್ಯಾಚರಣೆ ತೀವ್ರ

ದಿಢೀರ್ ಪ್ರವಾಹದಿಂದಾಗಿ ಪಹಲ್ಗಾಮ್‌ನ ರಸ್ತೆಗಳು ಜಲಾವೃತಗೊಂಡಿದ್ದು, ಚರಂಡಿ ನೀರು ರಸ್ತೆಗಳ ಮೇಲೆ ಹರಿದಿದೆ. ಹತ್ತಾರು ಮನೆ ಹಾಗೂ ಹೋಟೆಲ್‌ಗಳ ಒಳಗೆ ನೀರು ನುಗ್ಗಿದ್ದರಿಂದ ಸಾರ್ವಜನಿಕ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ತಕ್ಷಣ ಕಾರ್ಯಪ್ರವೃತ್ತರಾದ ರಕ್ಷಣಾ ಪಡೆಗಳು ಹೋಟೆಲ್‌ಗಳಲ್ಲಿದ್ದ ಪ್ರವಾಸಿಗರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಿದ್ದಾರೆ. ಸದ್ಯಕ್ಕೆ ಯಾವುದೇ ಪ್ರಾಣಾಪಾಯ ಅಥವಾ ಭಾರಿ ಆಸ್ತಿ ನಷ್ಟ ಸಂಭವಿಸಿಲ್ಲ ಎಂದು ವರದಿಯಾಗಿದೆ.

ನದಿಗಳಲ್ಲಿ ಹೆಚ್ಚಿದ ಜಲಮಟ್ಟ: ಅಧಿಕಾರಿಗಳ ಸ್ಪಷ್ಟನೆ

ಭಾನುವಾರವೂ ಮಳೆ ಮುಂದುವರಿದಿದ್ದು, ಶೇಷ್ನಾಗ್ ನುಲ್ಲಾ ಮತ್ತು ಲಿಡ್ಡರ್ ನುಲ್ಲಾ ಜಲಮೂಲಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗುತ್ತಿದೆ. ಆದಾಗ್ಯೂ, ಸದ್ಯಕ್ಕೆ ನದಿಗಳು ಅಪಾಯದ ಮಟ್ಟಕ್ಕಿಂತ ಕೆಳಗಿರುವುದರಿಂದ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಡಳಿತ ಭರವಸೆ ನೀಡಿದೆ. ರಕ್ಷಣಾ ತಂಡಗಳು ಕಟ್ಟೆಚ್ಚರ ವಹಿಸಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !