ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡಿಯನ್ ಪ್ರೀಮಿಯರ್ ಲೀಗ್ (IPL) ಇತಿಹಾಸದ ಅತ್ಯಂತ ಯಶಸ್ವಿ ಕೋಚ್‌ಗಳಲ್ಲಿ ಒಬ್ಬರಾದ ಸ್ಟೀಫನ್ ಫ್ಲೆಮಿಂಗ್, ಚೆನ್ನೈ ಸೂಪರ್ ಕಿಂಗ್ಸ್ ಮುಖ್ಯ ತರಬೇತುದಾರ ಹುದ್ದೆಯಿಂದ ಅಧಿಕೃತವಾಗಿ ನಿರ್ಗಮಿಸಿದ್ದಾರೆ. ಇದರೊಂದಿಗೆ ಸಿಎಸ್‌ಕೆ ಫ್ರಾಂಚೈಸಿ ಜೊತೆಗಿನ ಅವರ 17 ವರ್ಷಗಳ ಅದ್ಭುತ ಪಯಣಕ್ಕೆ ತೆರೆ ಬಿದ್ದಿದೆ.
ಸಿಎಸ್‌ಕೆ ಹೊಸ ಕೋಚ್ ರೇಸ್‌ನಲ್ಲಿ ಹೇಮಂಗ್ ಬದಾನಿ!
ಮೂಲಗಳ ಪ್ರಕಾರ, ಮುಂಬರುವ ಸೀಸನ್‌ಗಾಗಿ ಸಿಎಸ್‌ಕೆ ತನ್ನ ಕ್ರಿಕೆಟ್ ಕಾರ್ಯಾಚರಣೆಗಳಲ್ಲಿ ಭಾರಿ ಬದಲಾವಣೆ ಮಾಡಲು ಮುಂದಾಗಿದೆ. ಫ್ಲೆಮಿಂಗ್ ಸ್ಥಾನಕ್ಕೆ ಭಾರತ ತಂಡದ ಮಾಜಿ ಬ್ಯಾಟರ್ ಹೇಮಂಗ್ ಬದಾನಿ ಅವರ ಹೆಸರು ಮುಂಚೂಣಿಯಲ್ಲಿದ್ದು, ಅವರು ಹೊಸ ಕೋಚಿಂಗ್ ಬಳಗವನ್ನು ಮುನ್ನಡೆಸುವ ಸಾಧ್ಯತೆ ದಟ್ಟವಾಗಿದೆ.
ರೂಪಾ ಗುರುನಾಥ್ ಅವರಿಂದ ಅಧಿಕೃತ ಪ್ರಕಟಣೆ
ಚೆನ್ನೈ ಸೂಪರ್ ಕಿಂಗ್ಸ್ ಕ್ರಿಕೆಟ್ ಲಿಮಿಟೆಡ್‌ನ ಪೂರ್ಣಾವಧಿ ನಿರ್ದೇಶಕಿ ರೂಪಾ ಗುರುನಾಥ್ ಈ ಮಹತ್ವದ ನಿರ್ಧಾರವನ್ನು ಖಚಿತಪಡಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, “ಸ್ಟೀಫನ್ ಫ್ಲೆಮಿಂಗ್ ನಮ್ಮ ತಂಡದ ಯಶಸ್ಸಿನ ಹೆಮ್ಮೆಯ ಹೃದಯ ಬಡಿತವಾಗಿದ್ದರು. ಕಳೆದ ಎರಡು ದಶಕಗಳಿಂದ ಸಿಎಸ್‌ಕೆ ತಂಡಕ್ಕೆ ವಿಶಿಷ್ಟ ಗುರುತು ಮತ್ತು ಶ್ರೇಷ್ಠತೆಯನ್ನು ತಂದುಕೊಡುವಲ್ಲಿ ಅವರ ಪಾತ್ರ ಅನನ್ಯ. ಮೈದಾನದ ಈ ಜಂಟಿ ಪಯಣ ಮುಗಿದಿದ್ದರೂ, ಅವರು ಸದಾ ಸಿಎಸ್‌ಕೆ ಪರಂಪರೆಯ ಅವಿಭಾಜ್ಯ ಅಂಗವಾಗಿ ಉಳಿಯಲಿದ್ದಾರೆ” ಎಂದು ಭಾವುಕರಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.
ಸಿಎಸ್‌ಕೆ ಫ್ರಾಂಚೈಸಿಯಲ್ಲಿನ ಈ ಹಠಾತ್ ಬದಲಾವಣೆ ಐಪಿಎಲ್ ಕ್ರಿಕೆಟ್ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ.



