ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡಿಯನ್ ಪ್ರೀಮಿಯರ್ ಲೀಗ್ 2027 ಮಿನಿ ಹರಾಜಿಗೂ ಮುನ್ನ ರಿಟೆನ್ಷನ್ ದಿನಾಂಕ ಹತ್ತಿರವಾಗುತ್ತಿದ್ದಂತೆ, ಕ್ರಿಕೆಟ್ ಅಂಗಳದಲ್ಲಿ ಸಂಚಲನ ಸೃಷ್ಟಿಯಾಗಿದೆ. ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ತಮ್ಮ ಅಖಾಡಕ್ಕೆ ಸೆಳೆದುಕೊಳ್ಳಲು ಪ್ರಮುಖ ಫ್ರಾಂಚೈಸಿಗಳ ನಡುವೆ ಒಳಗೊಳಗೇ ಬಿರುಸಿನ ಪೈಪೋಟಿ ಆರಂಭವಾಗಿದೆ. ವರದಿಗಳ ಪ್ರಕಾರ, ಬರೋಬ್ಬರಿ 6 ಐಪಿಎಲ್ ತಂಡಗಳು ಹಾರ್ದಿಕ್ ಅವರನ್ನು ಟ್ರೇಡ್ ಮಾಡಿಕೊಳ್ಳಲು ಮುಂಬೈ ಮ್ಯಾನೇಜ್ಮೆಂಟ್ ಬಾಗಿಲು ತಟ್ಟುತ್ತಿವೆ.
ಈ ಬಾರಿ ಕೇವಲ ಹಣದ ವ್ಯವಹಾರಕ್ಕಿಂತ ಹೆಚ್ಚಾಗಿ, ‘ಪ್ಲೇಯರ್ ಟು ಪ್ಲೇಯರ್’ ಸ್ವಾಪ್ ಡೀಲ್ ಮಾಡಿಕೊಳ್ಳಲು ತಂಡಗಳು ಹೆಚ್ಚು ಆಸಕ್ತಿ ವಹಿಸಿವೆ. ಹಾರ್ದಿಕ್ ಪಾಂಡ್ಯ ಅವರ ಪ್ರಸ್ತುತ ಮೌಲ್ಯ 16.35 ಕೋಟಿ ಆಗಿದ್ದು, ಈ ಭಾರಿ ಮೊತ್ತವನ್ನು ಸರಿದೂಗಿಸಲು ಪ್ರಮುಖ ತಂಡಗಳು ತಮ್ಮ ಸ್ಟಾರ್ ಆಟಗಾರರನ್ನೇ ಮುಂಬೈಗೆ ಬಿಟ್ಟುಕೊಡಲು ಸಿದ್ಧವಾಗಿವೆ. ಮುಂಬೈ ಇಂಡಿಯನ್ಸ್ ಜೊತೆ ಈಗಾಗಲೇ ಈ ಕುರಿತು ಪ್ರಥಮ ಹಂತದ ಮಾತುಕತೆಗಳು ನಡೆದಿವೆ ಎನ್ನಲಾಗಿದೆ.
ವಿಶೇಷವೆಂದರೆ ಹಾರ್ದಿಕ್ ಪಾಂಡ್ಯರನ್ನು ಖರೀದಿಸಲು ಐಪಿಎಲ್‌ನ ಪ್ರಮುಖ ಚಾಂಪಿಯನ್ ತಂಡಗಳೇ ಸಾಲಾಗಿ ನಿಂತಿವೆ. 2024ರ ಚಾಂಪಿಯನ್ ಕೆಕೆಆರ್ ತಂಡಕ್ಕೆ ಒಬ್ಬ ಅನುಭವಿ, ಆಕ್ರಮಣಕಾರಿ ಭಾರತೀಯ ನಾಯಕನ ಅಗತ್ಯವಿದೆ. ಹೀಗಾಗಿ ಕೆಕೆಆರ್ ಈ ರೇಸ್‌ನಲ್ಲಿ ಅತ್ಯಂತ ಮುಂಚೂಣಿಯಲ್ಲಿದೆ.
ರಾಜಸ್ಥಾನ್ ರಾಯಲ್ಸ್ ಕೂಡ ಹಾರ್ದಿಕ್ ಅವರನ್ನು ತಂಡಕ್ಕೆ ಸೇರಿಸಿಕೊಂಡು, ಆಲ್‌ರೌಂಡರ್ ಶಕ್ತಿಯನ್ನು ದುಪ್ಪಟ್ಟುಗೊಳಿಸಲು ಯೋಜಿಸಿದೆ. ಸಿಎಸ್ಕೆ ಇತ್ತೀಚೆಗೆ ಬಿಡುಗಡೆ ಮಾಡಿದ ಪ್ರೋಮೋ ಒಂದರಲ್ಲಿ ಹಾರ್ದಿಕ್ ಅವರ ’33’ ನಂಬರ್ ಜೆರ್ಸಿ ಹೈಲೈಟ್ ಆಗಿದ್ದು. ಹೀಗಾಗಿ ಸಿಎಸ್ಕೆ ಕೂಡ ತೆರೆಮರೆಯಲ್ಲಿ ಪಾಂಡ್ಯ ಸೇರ್ಪಡೆಗೆ ಯತ್ನ ನಡೆಸುತ್ತಿದೆ.
ಒಟ್ಟಿನಲ್ಲಿ, ರಿಟೆನ್ಷನ್ ಅವಧಿ ಮುಗಿಯುವುದರೊಳಗೆ ಹಾರ್ದಿಕ್ ಪಾಂಡ್ಯ ಯಾವ ಜೆರ್ಸಿ ಧರಿಸಲಿದ್ದಾರೆ ಎಂಬುದು ಈ ಅತ್ಯಂತ ರೋಚಕ ವಿಷಯವಾಗಿದೆ.



