July 13, 2026
Monday, July 13, 2026
spot_img

ವಿಮಾನ ನಿಲ್ದಾಣದ ಮಸೀದಿಗೆ ಸಾರ್ವಜನಿಕರಿಗೆ ನಿರ್ಬಂಧ: ಬಂಗಾಳದಲ್ಲಿ ಹೊಸ ರಾಜಕೀಯ ಕಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳದಲ್ಲಿ ವಿಮಾನ ನಿಲ್ದಾಣದ ಭದ್ರತೆಯನ್ನು ಕೇಂದ್ರವಾಗಿಟ್ಟುಕೊಂಡು ಹೊಸ ವಿವಾದ ತಲೆದೋರಿದೆ.

ಕೊಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿರುವ ಐತಿಹಾಸಿಕ ಮಸೀದಿಗೆ ಸಾರ್ವಜನಿಕರ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿರುವ ಕ್ರಮ ರಾಜಕೀಯ ಚರ್ಚೆಗೆ ಕಾರಣವಾಗಿದೆ.

ಆಡಳಿತವು ಇದನ್ನು ಭದ್ರತಾ ಕ್ರಮ ಎಂದು ಸಮರ್ಥಿಸಿಕೊಳ್ಳುತ್ತಿದ್ದರೆ, ವಿರೋಧ ಪಕ್ಷಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿವೆ.

ಏರ್ಪೋರ್ಟ್ ನಲ್ಲಿ ಏನಾಯಿತು?

ವಿಮಾನ ನಿಲ್ದಾಣದ ರನ್‌ವೇ ಸಮೀಪದಲ್ಲಿರುವ ಸುಮಾರು 136 ವರ್ಷದ ಗೌರಿಪುರ ಜಮಾ ಮಸೀದಿಗೆ ಹೊರಗಿನಿಂದ ಬರುವವರಿಗೆ ನೀಡಲಾಗುತ್ತಿದ್ದ ಪ್ರವೇಶ ಪಾಸ್‌ಗಳನ್ನು ಅಧಿಕಾರಿಗಳು ರದ್ದುಗೊಳಿಸಿದ್ದಾರೆ. ನವೀಕರಣ ಕಾಮಗಾರಿ ಹಾಗೂ ವಿಮಾನ ನಿಲ್ದಾಣದ ಭದ್ರತಾ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ತಾತ್ಕಾಲಿಕವಾಗಿ ನಮಾಜ್ ಪ್ರಾರ್ಥನೆಯನ್ನೂ ಸ್ಥಗಿತಗೊಳಿಸಲಾಗಿದೆ. ಭವಿಷ್ಯದಲ್ಲಿ ಮಸೀದಿಯನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸುವ ಪ್ರಸ್ತಾವನೆಯೂ ಚರ್ಚೆಯಲ್ಲಿದೆ.

ಇದನ್ನೂ ಓದಿ:

ಭದ್ರತೆ ಕಾರಣವೇನು?

ಅಧಿಕಾರಿಗಳ ಪ್ರಕಾರ, ಮಸೀದಿ ಎರಡನೇ ರನ್‌ವೇಗೆ ಅತ್ಯಂತ ಸಮೀಪದಲ್ಲಿರುವುದರಿಂದ ದೊಡ್ಡ ವಿಮಾನಗಳ ಹಾರಾಟ ಮತ್ತು ಇಳಿಯುವ ಕಾರ್ಯಾಚರಣೆಗೆ ಅಡಚಣೆ ಉಂಟಾಗುತ್ತಿತ್ತು. ಜೊತೆಗೆ ರನ್‌ವೇ ವಿಸ್ತರಣೆ ಹಾಗೂ ಆಧುನಿಕ ನ್ಯಾವಿಗೇಶನ್ ವ್ಯವಸ್ಥೆಗಳ ಅಳವಡಿಕೆಗೂ ಈ ಸ್ಥಳ ಅಡ್ಡಿಯಾಗುತ್ತಿದೆ. ಇದೇ ಕಾರಣಕ್ಕೆ ಭದ್ರತಾ ದೃಷ್ಟಿಯಿಂದ ಹೊಸ ನಿರ್ಬಂಧ ಜಾರಿಗೊಳಿಸಲಾಗಿದೆ ಎಂದು ತಿಳಿಸಲಾಗಿದೆ.

ಸರ್ಕಾರ ಹೇಳಿದ್ದೇನು?

ಸರ್ಕಾರದ ಈ ನಿರ್ಧಾರದ ಕುರಿತು ಮಾತನಾಡಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ದೇಶದ ಭದ್ರತೆಯ ವಿಚಾರದಲ್ಲಿ ಯಾವುದೇ ರೀತಿಯ ರಾಜಿ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವಿಮಾನ ನಿಲ್ದಾಣಗಳು ಅತ್ಯಂತ ಸೂಕ್ಷ್ಮ ಪ್ರದೇಶಗಳಾಗಿರುವುದರಿಂದ ಅಲ್ಲಿನ ಪ್ರವೇಶ ವ್ಯವಸ್ಥೆ ಕಟ್ಟುನಿಟ್ಟಾಗಿರುವುದು ಅಗತ್ಯ. ಈ ನಿರ್ಧಾರವನ್ನು ಧಾರ್ಮಿಕ ಅಥವಾ ರಾಜಕೀಯ ದೃಷ್ಟಿಯಿಂದ ನೋಡುವ ಅಗತ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !