September 14, 2026
Monday, September 14, 2026
spot_img

ಬಿಡದಿ ಟೌನ್‌ಶಿಪ್ ವಿವಾದಕ್ಕೆ ಮಾಜಿ ಪ್ರಧಾನಿ ಎಂಟ್ರಿ: ಪತ್ರದ ಮೂಲಕ ಸಿಎಂಗೆ ಎಚ್ಚರಿಕೆ ಕೊಟ್ಟ ಹೆಚ್.ಡಿ.ದೇವೇಗೌಡ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಮನಗರ ಜಿಲ್ಲೆಯ ಬಿಡದಿ ಸುತ್ತಮುತ್ತ ಕೈಗೊಳ್ಳಲು ಉದ್ದೇಶಿಸಿರುವ ಬೃಹತ್ ಟೌನ್‌ಶಿಪ್ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ನೇರವಾಗಿ ಅಖಾಡಕ್ಕಿಳಿದಿದ್ದಾರೆ. ಯೋಜನೆಯನ್ನು ತಕ್ಷಣವೇ ರದ್ದುಗೊಳಿಸಬೇಕೆಂದು ಆಗ್ರಹಿಸಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ಗೆ ಸುದೀರ್ಘ ಪತ್ರ ಬರೆಯುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಮನವಿಗೆ ಸರ್ಕಾರ ಸ್ಪಂದಿಸದಿದ್ದರೆ ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಸತ್ಯಾಗ್ರಹ ನಡೆಸುವುದಾಗಿ ಪತ್ರದ ಮೂಲಕ 93 ವರ್ಷದ ಹಿರಿಯ ನಾಯಕ ದೇವೇಗೌಡರು ಎಚ್ಚರಿಸಿದ್ದಾರೆ.

10,580 ಸಣ್ಣ ರೈತರ ಬದುಕು ಬೀದಿಗೆ

ಮಾಜಿ ಪ್ರಧಾನಿ ದೇವೇಗೌಡರು ಸಿಎಂಗೆ ಬರೆದಿರುವ ಪತ್ರದಲ್ಲಿ ಬಿಡದಿ ಭಾಗದ ಬಡ ರೈತರ ಪರವಾಗಿ ಆತಂಕಕಾರಿ ಅಂಕಿ-ಅಂಶಗಳನ್ನು ತೆರೆದಿಟ್ಟಿದ್ದಾರೆ. ಉದ್ದೇಶಿತ ಯೋಜನೆಯ ಜಾಗದಲ್ಲಿ ಕೃಷಿ ಮಾಡುತ್ತಿರುವವರ ಪೈಕಿ 10,580 ಮಂದಿ ಸಣ್ಣ ರೈತರಾಗಿದ್ದು, ಈ ಭಾಗದ ಶೇ. 82ರಷ್ಟು ಜನ ಕೇವಲ ಒಂದು ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ಅತಿ ಸಣ್ಣ ರೈತರಾಗಿದ್ದಾರೆ. ಕೇವಲ ಗುಂಟೆ ಹಾಗೂ ಎಕರೆ ಲೆಕ್ಕದಲ್ಲಿ ಭೂಮಿ ಹೊಂದಿರುವ ಈ ರೈತರು ಕೃಷಿ ಹಾಗೂ ಹೈನುಗಾರಿಕೆಯನ್ನೇ ನಂಬಿ ಬದುಕುತ್ತಿದ್ದಾರೆ. ಭೂಸ್ವಾಧೀನ ಪ್ರಕ್ರಿಯೆಯಿಂದಾಗಿ ಇವರೆಲ್ಲರೂ ಸಂಪೂರ್ಣವಾಗಿ ನಿರಾಶ್ರಿತರಾಗಲಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಪ್ರತಿಭಟನಾ ನಿರತ ರೈತರ ಮೇಲಿನ ಎಫ್‌ಐಆರ್ ವಾಪಸ್‌ಗೆ ಆಗ್ರಹ

ಇತ್ತೀಚೆಗೆ ಬಿಡದಿಯ ಮಂಡಲಹಳ್ಳಿಯಲ್ಲಿ ಜಂಟಿ ಅಳತೆ ಸಮೀಕ್ಷೆ ನಡೆಸಲು ಬಂದಿದ್ದ ಅಧಿಕಾರಿಗಳ ವಾಹನಗಳನ್ನು ಸ್ಥಳೀಯ ರೈತರು ತಡೆದು ತೀವ್ರ ಆಕ್ರೋಶ ಹೊರಹಾಕಿದ್ದರು. ಈ ವೇಳೆ ನಡೆದ ಸಂಘರ್ಷಕ್ಕೆ ಸಂಬಂಧಿಸಿದಂತೆ ಪೊಲೀಸರು ರೈತರ ಮೇಲೆ ಮೊಕದ್ದಮೆ ಹೂಡಿದ್ದಾರೆ. ಅಮಾಯಕ ರೈತರ ಮೇಲೆ ದಾಖಲಿಸಿರುವ ಎಲ್ಲಾ ಎಫ್‌ಐಆರ್‌ಗಳನ್ನು ಸರ್ಕಾರ ಹಿಂಪಡೆಯಬೇಕು ಮತ್ತು ಬಲವಂತದ ಭೂಸ್ವಾಧೀನ ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸಬೇಕು ಎಂದು ದೇವೇಗೌಡರು ಒತ್ತಾಯಿಸಿದ್ದಾರೆ.

“ರಿಯಲ್ ಎಸ್ಟೇಟ್ ದಂಧೆ” ಎಂದು ದೊಡ್ಡಗೌಡರ ಆಕ್ರೋಶ

ಈ ಯೋಜನೆಯಿಂದ ಕೇವಲ ಕಾರ್ಪೊರೇಟ್ ಸಂಸ್ಥೆಗಳಿಗೆ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಮಾತ್ರ ಲಾಭವಾಗಲಿದೆ. ಬಡ ರೈತರ ಫಲವತ್ತಾದ ಭೂಮಿಯನ್ನು ಕಿತ್ತುಕೊಂಡು ಸರ್ಕಾರ ರಿಯಲ್ ಎಸ್ಟೇಟ್ ವ್ಯವಹಾರ ಮಾಡಲು ಹೊರಟಿದೆ ಎಂದು ದೇವೇಗೌಡರು ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ:

ರಾಜ್ಯ ಸರ್ಕಾರ ಈ ಯೋಜನೆಯಿಂದ ಹಿಂದೆ ಸರಿಯದಿದ್ದರೆ, ರೈತರ ಹಿತರಕ್ಷಣೆಗಾಗಿ ತಾವು ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಧರಣಿ ಕೂರುವುದು ನಿಶ್ಚಿತ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದರಿಂದಾಗಿ ಬಿಡದಿ ಟೌನ್‌ಶಿಪ್ ವಿವಾದವು ಈಗ ರಾಜ್ಯ ರಾಜಕಾರಣದಲ್ಲಿ ಭಾರಿ ಜಟಾಪಟಿಗೆ ಕಾರಣವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !