ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿಯ ವಾಹನ ಸವಾರರನ್ನು ಹೈರಾಣಾಗಿಸುತ್ತಿರುವ ಸಂಚಾರ ದಟ್ಟಣೆಗೆ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ. ಶಾಲಾ ಮಕ್ಕಳು ಹಾಗೂ ಶಿಕ್ಷಕರ ದೈನಂದಿನ ಪ್ರಯಾಣದ ನರಕಯಾತನೆ ತಪ್ಪಿಸಲು ನಗರದ ಸರ್ಕಾರಿ ಶಾಲೆಗಳ ವೇಳಾಪಟ್ಟಿಯನ್ನು ಸಂಪೂರ್ಣವಾಗಿ ಬದಲಾಯಿಸಲು ಶಾಲಾ ಶಿಕ್ಷಣ ಇಲಾಖೆ ಮುಂದಾಗಿದೆ.
ಶಿಕ್ಷಕರ ಬೇಡಿಕೆಗೆ ಸಚಿವರ ಸಾಥ್
ಬೆಂಗಳೂರಿನ ಟ್ರಾಫಿಕ್‌ನಿಂದಾಗಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ನಿಗದಿತ ಸಮಯಕ್ಕೆ ಶಾಲೆಗೆ ಹಾಜರಾಗಲು ಹರಸಾಹಸ ಪಡುತ್ತಿದ್ದಾರೆ. ಈ ಸಮಸ್ಯೆಯನ್ನು ಮನಗಂಡು ಶಿಕ್ಷಕರ ಸಂಘಟನೆಗಳು ನೀಡಿದ ಸುದೀರ್ಘ ಪ್ರಸ್ತಾವನೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಎದುರಾಗುತ್ತಿರುವ ತೊಡಕುಗಳು
ಪ್ರಸ್ತುತ ನಗರದ ಸರ್ಕಾರಿ ಶಾಲೆಗಳು ಬೆಳಗ್ಗೆ 10:30 ರಿಂದ ಸಂಜೆ 4:30 ರವರೆಗೆ ನಡೆಯುತ್ತಿವೆ. ಶಾಲಾ ಅವಧಿಯಲ್ಲೇ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ, ಕ್ಷೀರಭಾಗ್ಯ ಯೋಜನೆಯ ಹಾಲು ಹಾಗೂ ಮೊಟ್ಟೆ/ಬಾಳೆಹಣ್ಣು ವಿತರಿಸಲು ಕನಿಷ್ಠ 1 ಗಂಟೆಗೂ ಅಧಿಕ ಸಮಯ ವ್ಯಯವಾಗುತ್ತಿದೆ. ಇದರಿಂದಾಗಿ ಪಠ್ಯಕ್ರಮ ಬೋಧನೆಗೆ ಸೂಕ್ತ ಸಮಯ ಸಿಗದೆ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟದ ಮೇಲೆ ಪ್ರಭಾವ ಬೀರುತ್ತಿದೆ.
ಬದಲಾವಣೆಯ ಪ್ರಸ್ತಾವನೆ ಏನು?
ಈ ಎಲ್ಲಾ ಗೊಂದಲಗಳಿಗೆ ಮುಕ್ತಿ ಹಾಡಲು ಸರ್ಕಾರಿ ಶಾಲೆಗಳ ಸಮಯವನ್ನು ಬೆಳಗ್ಗೆ 8:30 ರಿಂದ ಮಧ್ಯಾಹ್ನ 3:30 ರವರೆಗೆ ಮರುನಿಗದಿ ಮಾಡುವಂತೆ ಶಿಕ್ಷಕರು ವಿನಂತಿಸಿದ್ದಾರೆ. ಬೆಳಗ್ಗೆ ಬೇಗನೆ ಶಾಲೆ ಆರಂಭವಾದರೆ, ಸಂಜೆ ನಗರದಲ್ಲಿ ವಾಹನ ದಟ್ಟಣೆ ತಾರಕಕ್ಕೇರುವ ಮುನ್ನವೇ ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಸುರಕ್ಷಿತವಾಗಿ ಮನೆ ಸೇರಬಹುದು ಎನ್ನುವುದು ಈ ಚಿಂತನೆಯ ಹಿಂದಿನ ಮುಖ್ಯ ಉದ್ದೇಶವಾಗಿದೆ.
ಇದನ್ನೂ ಓದಿ:
ಶೀಘ್ರದಲ್ಲೇ ಉನ್ನತ ಮಟ್ಟದ ಸಭೆ
ಶಾಲಾ ಅವಧಿಯ ಬದಲಾವಣೆಯು ಇಡೀ ಬೆಂಗಳೂರಿನ ಸಾರಿಗೆ ವ್ಯವಸ್ಥೆಯ ಮೇಲೆ ದೊಡ್ಡ ಪರಿಣಾಮ ಬೀರುವುದರಿಂದ, ಕೇವಲ ಶಿಕ್ಷಣ ಇಲಾಖೆಯೊಂದೇ ಇದರಲ್ಲಿ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಸಚಿವ ಮಧು ಬಂಗಾರಪ್ಪ ಅವರ ನೇತೃತ್ವದಲ್ಲಿ ಶೀಘ್ರದಲ್ಲೇ ಒಂದು ಬೃಹತ್ ಸಮನ್ವಯ ಸಭೆ ನಡೆಯಲಿದೆ. ಈ ಉನ್ನತ ಮಟ್ಟದ ಸಭೆಯಲ್ಲಿ ಬೆಂಗಳೂರು ಸಂಚಾರ ಪೊಲೀಸ್ ಅಧಿಕಾರಿಗಳು, ಬಿಎಂಟಿಸಿ ಆಡಳಿತ ಮಂಡಳಿ, ಖಾಸಗಿ ಶಾಲಾ ವಾಹನ ಚಾಲಕರ ಸಂಘ, ಪೋಷಕರ ಒಕ್ಕೂಟ ಹಾಗೂ ಶಿಕ್ಷಕರ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಈ ಜಂಟಿ ಸಭೆಯಲ್ಲಿ ಎಲ್ಲರ ಅಭಿಪ್ರಾಯಗಳನ್ನು ಆಲಿಸಿ ಅಂತಿಮ ನಿರ್ಧಾರ ಕೈಗೊಂಡ ಬಳಿಕ ಹೊಸ ಸರ್ಕಾರದ ಆದೇಶ ಪ್ರಕಟವಾಗಲಿದೆ.



