ದಿನಾ ರಾತ್ರಿ ಅನ್ನ ಅಥವಾ ಚಪಾತಿ ತಿಂದು ಬೇಜಾರಾಗಿದ್ದರೆ, ದೇಹಕ್ಕೆ ಹಗುರವಾದ ಮತ್ತು ಆರೋಗ್ಯಕರವಾದ ಆಹಾರ ತಿನ್ನುವುದು ಒಳ್ಳೆಯದು. ಅದರಲ್ಲೂ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಸೂಪ್ ಅತ್ಯುತ್ತಮ ಆಯ್ಕೆಯಾಗಿದೆ. ಮನೆಯಲ್ಲೇ ಹೋಟೆಲ್ ಶೈಲಿಯಲ್ಲಿ ಅತ್ಯಂತ ಸುಲಭವಾಗಿ ಮತ್ತು ಕೇವಲ 10 ನಿಮಿಷಗಳಲ್ಲಿ ಈ ಸ್ವೀಟ್ ಕಾರ್ನ್ ಸೂಪ್ ಮಾಡಬಹುದು.
ಬೇಕಾಗುವ ಸಾಮಗ್ರಿಗಳು:
ಸ್ವೀಟ್ ಕಾರ್ನ್
ಕ್ಯಾರೆಟ್ ಮತ್ತು ಬೀನ್ಸ್
ಶುಂಠಿ ಮತ್ತು ಬೆಳ್ಳುಳ್ಳಿ
ಬೆಣ್ಣೆ ಅಥವಾ ಎಣ್ಣೆ
ಕಾರ್ನ್ ಫ್ಲೋರ್
ಕಾಳುಮೆಣಸಿನ ಪುಡಿ
ಸ್ಪ್ರಿಂಗ್ ಆನಿಯನ್
ಉಪ್ಪು
ನೀರು
ಇದನ್ನೂ ಓದಿ:
ಮಾಡುವ ವಿಧಾನ
1 ಕಪ್ ಸ್ವೀಟ್ ಕಾರ್ನ್ನಲ್ಲಿ ಕಾಲು ಕಪ್ ಕಾರ್ನ್ ಅನ್ನು ಮಿಕ್ಸಿ ಜಾರಿಗೆ ಹಾಕಿ, ಸ್ವಲ್ಪ ನೀರು ಸೇರಿಸಿ ನುಣ್ಣಗೆ ಪೇಸ್ಟ್ ಮಾಡಿ ಪಕ್ಕಕ್ಕೆ ಎತ್ತಿಟ್ಟುಕೊಳಬೇಕು. ನಂತರ ಒಂದು ಪಾತ್ರೆಗೆ ಬೆಣ್ಣೆ ಅಥವಾ ಎಣ್ಣೆ ಹಾಕಿ ಬಿಸಿ ಮಾಡಿ, ಅದಕ್ಕೆ ಸಣ್ಣಗೆ ಹೆಚ್ಚಿದ ಶುಂಠಿ ಮತ್ತು ಬೆಳ್ಳುಳ್ಳಿ ಹಾಕಿ 1 ನಿಮಿಷ ಹುರಿಯಬೇಕು. ನಂತರ ಹೆಚ್ಚಿದ ಕ್ಯಾರೆಟ್, ಬೀನ್ಸ್ ಮತ್ತು ಉಳಿದ ಮುಕ್ಕಾಲು ಕಪ್ ಸ್ವೀಟ್ ಕಾರ್ನ್ ಹಾಕಿ ಮಧ್ಯಮ ಉರಿಯಲ್ಲಿ 2 ನಿಮಿಷಗಳ ಕಾಲ ಬಾಡಿಸಿ. ಒಂದು ಪಾತ್ರೆಗೆ 3 ಕಪ್ ನೀರು ಮತ್ತು ಮೊದಲೇ ರೆಡಿ ಮಾಡಿಟ್ಟುಕೊಂಡ ಕಾರ್ನ್ ಪೇಸ್ಟ್ ಅನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ತರಕಾರಿಗಳು ಬೇಯುವವರೆಗೆ 5 ನಿಮಿಷಗಳ ಕಾಲ ಚೆನ್ನಾಗಿ ಕುದಿಸಬೇಕು.
ನಂತರ ಒಂದು ಸಣ್ಣ ಕಪ್ನಲ್ಲಿ 1.5 ಚಮಚ ಕಾರ್ನ್ ಫ್ಲೋರ್ಗೆ ಸ್ವಲ್ಪ ನೀರು ಸೇರಿಸಿ ಗಂಟಿಲ್ಲದಂತೆ ಕರಗಿಸಿ, ಕುದಿಯುತ್ತಿರುವ ಸೂಪ್ಗೆ ಸುರಿಯುತ್ತಾ ಕೈಯಾಡಿಸಿ. ಸೂಪ್ ಗಟ್ಟಿಯಾಗತೊಡಗಿದಾಗ ಕಾಳುಮೆಣಸಿನ ಪುಡಿ ಮತ್ತು ಹಸಿರು ಈರುಳ್ಳಿ ಸೊಪ್ಪನ್ನು ಹಾಕಿ ಮಿಕ್ಸ್ ಮಾಡಿ ಒಲೆಯಿಂದ ಇಳಿಸಿದರೆ ಬಿಸಿಬಿಸಿಯಾದ ಮತ್ತು ಸ್ವಾದಿಷ್ಟವಾದ ಸ್ವೀಟ್ ಕಾರ್ನ್ ಸೂಪ್ ಸವಿಯಲು ಸಿದ್ಧ.



