ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸದ್ಯ ಮುಂಗಾರು ಮಾರುತಗಳು ದುರ್ಬಲಗೊಂಡಿದ್ದು, ಹವಾಮಾನದಲ್ಲಿ ಭಾರಿ ಏರುಪೇರಾಗಿದೆ. ಜುಲೈ ತಿಂಗಳಲ್ಲೇ ಸೂರ್ಯನ ಶಾಖ ತೀವ್ರಗೊಂಡಿದ್ದು, ಬರೋಬ್ಬರಿ 112 ವರ್ಷಗಳ ಹಿಂದಿನ ತಾಪಮಾನದ ದಾಖಲೆಯನ್ನು ಬೆಂಗಳೂರು ಮುರಿದಿದೆ.
33.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲು:
ಸಾಮಾನ್ಯವಾಗಿ ಜುಲೈ ತಿಂಗಳಲ್ಲಿ ತಂಪಾದ ವಾತಾವರಣ ಇರುತ್ತಿದ್ದ ಬೆಂಗಳೂರಿನಲ್ಲಿ, ಈ ಬಾರಿ ಬರೋಬ್ಬರಿ 33.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಇದು ಹವಾಮಾನ ಇತಿಹಾಸದಲ್ಲೇ ಜುಲೈ ತಿಂಗಳಲ್ಲಿ ದಾಖಲಾದ ಅತ್ಯಧಿಕ ತಾಪಮಾನವಾಗಿದೆ. ಇದಕ್ಕೂ ಮುನ್ನ 1914 ಮತ್ತು 1926 ರ ಜುಲೈ ತಿಂಗಳಲ್ಲಿ 33.3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು ಇದುವರೆಗಿನ ಗರಿಷ್ಠ ದಾಖಲೆಯಾಗಿತ್ತು. ಈಗ ಆ ಶತಮಾನದ ಹಳೇ ದಾಖಲೆ ಪತನಗೊಂಡಿದೆ.
ಇದನ್ನೂ ಓದಿ:
ಜುಲೈ 19ರ ವರೆಗೆ ಇರಲಿದೆ ತಾಪದ ಬಿಸಿ:
ರಾಜ್ಯದಲ್ಲಿ ಮುಂಗಾರು ಮಳೆ ಕ್ಷೀಣಿಸಿರುವುದರಿಂದ ಉಷ್ಣಾಂಶದಲ್ಲಿ ಮತ್ತಷ್ಟು ಏರಿಕೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜುಲೈ 15ರಿಂದ ಜುಲೈ 19ರ ವರೆಗೆ ರಾಜ್ಯದಾದ್ಯಂತ ತಾಪಮಾನದಲ್ಲಿ ಇನ್ನು 3 ರಿಂದ 5 ಡಿಗ್ರಿ ಸೆಲ್ಸಿಯಸ್ನಷ್ಟು ಹೆಚ್ಚಳವಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.



