September 1, 2026
Tuesday, September 1, 2026
spot_img

ಪೊಲೀಸ್ ಆಯುಕ್ತರ ವರ್ಗಾವಣೆ ಸರ್ಕಾರದ ನಿರ್ಧಾರ: ಸಚಿವ ಸತೀಶ ಜಾರಕಿಹೊಳಿ ಸ್ಪಷ್ಟನೆ

ಹೊಸದಿಗಂತ ವರದಿ ಬೆಳಗಾವಿ:

ಬೆಳಗಾವಿ ನಗರ ಪೊಲೀಸ್ ಆಯುಕ್ತರ ವರ್ಗಾವಣೆ ಕುರಿತು ನಡೆಯುತ್ತಿರುವ ಚರ್ಚೆಗೆ ಇದೀಗ ರಾಜಕೀಯ ಬಣ್ಣ ಪಡೆದುಕೊಂಡಿದ್ದು, ಈ ವಿಚಾರವನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತಂದು ಚರ್ಚಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಗರ ಪೊಲೀಸ್ ಆಯುಕ್ತರು ಅಧಿಕಾರ ವಹಿಸಿಕೊಂಡು ಕೇವಲ 12–13 ತಿಂಗಳು ಮಾತ್ರ ಕಳೆದಿದೆ. ಹೀಗಾಗಿ ಕನಿಷ್ಠ ವಿಧಾನಮಂಡಲ ಅಧಿವೇಶನ ನಡೆಯುವವರೆಗೆ ಆಯುಕ್ತರನ್ನು ಮುಂದುವರಿಸಬೇಕು ಎಂಬ ಬೇಡಿಕೆ ಕೇಳಿಬಂದಿದೆ. ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತರದೇ ನಿರ್ಧಾರ ಕೈಗೊಳ್ಳಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಧಿಕಾರಿಗಳ ವರ್ಗಾವಣೆ ಹಾಗೂ ನೇಮಕಾತಿ ಸರ್ಕಾರದ ನಿರ್ಧಾರವಾಗಿದ್ದು, ಈ ಕುರಿತು ಮುಖ್ಯಮಂತ್ರಿ ಅವರೊಂದಿಗೆ ಮಾತನಾಡಿ ಮಾಹಿತಿ ಪಡೆಯುವುದಾಗಿ ಹೇಳಿದರು.

ಜಿಲ್ಲೆಯ ಪ್ರಮುಖ ಅಧಿಕಾರಿಗಳ ವರ್ಗಾವಣೆ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು ಚರ್ಚೆ ನಡೆಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ, ಆಯುಕ್ತರ ವರ್ಗಾವಣೆ ವಿಚಾರ ಕುತೂಹಲ ಮೂಡಿಸಿದೆ. ಈ ಕುರಿತು ಸರ್ಕಾರದ ಮಟ್ಟದಲ್ಲಿ ಈಗಾಗಲೇ ಚರ್ಚೆ ನಡೆದಿದೆಯೇ ಎಂಬ ಪ್ರಶ್ನೆಗೆ, ಜಿಲ್ಲೆಗೆ ಸಂಬಂಧಿಸಿದಂತೆ ಚರ್ಚೆ ನಡೆದಿದ್ದು, ಅಂತಿಮ ನಿರ್ಧಾರ ಸರ್ಕಾರದ್ದಾಗಿದೆ ಎಂದ ಅವರು, ಬೆಳಗಾವಿ ನಗರ ಪೊಲೀಸ್ ಆಯುಕ್ತರ ವರ್ಗಾವಣೆ ವಿಚಾರದಲ್ಲಿ ಸರ್ಕಾರದ ನಿರ್ಧಾರವೇ ಅಂತಿಮ ಎಂದು ಸಚಿವರು ಸ್ಪಷ್ಟಪಡಿಸಿದರು.

ಫೋರ್ಜರಿ ದಾಖಲೆ ಸೃಷ್ಟಿ ಆರೋಪ:

 ಇದೇ ಸಂದರ್ಭದಲ್ಲಿ ತಮ್ಮ ವಿರುದ್ಧ ಕೇಳಿಬರುತ್ತಿರುವ ಐದು ಎಕರೆ ಜಮೀನು ಕುರಿತ ಆರೋಪಗಳ ಬಗ್ಗೆಯೂ ಸಚಿವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ತಮ್ಮ ವಿರುದ್ಧ ಆರೋಪ ಮಾಡುವ ಉದ್ದೇಶದಿಂದ ನಕಲಿ ಹಾಗೂ ಫೋರ್ಜರಿ ದಾಖಲೆಗಳನ್ನು ಸೃಷ್ಟಿಸಿ ಹರಿಬಿಡಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಯಾರ ಬಳಿ ಇಂತಹ ದಾಖಲೆಗಳಿದ್ದರೂ ಸಂಬಂಧಪಟ್ಟ ಪೊಲೀಸ್ ಠಾಣೆಗೆ ದೂರು ನೀಡಲಿ. ದಾಖಲೆಗಳು ನಿಜವೇ ಅಥವಾ ನಕಲಿಯೇ ಎಂಬುದು ತನಿಖೆಯಿಂದ ಹೊರಬರಲಿದೆ. ಆರೋಪಗಳನ್ನು ಮಾಡುವ ಬದಲು ಸೂಕ್ತ ದಾಖಲೆಗಳೊಂದಿಗೆ ದೂರು ನೀಡುವಂತೆ ತಾವು ಈಗಾಗಲೇ ಹೇಳಲಾಗಿದೆ ಎಂದರು.

ಇದನ್ನೂ ಓದಿ:

ಆರೋಪಗಳು ಬಂದ ಮಾತ್ರಕ್ಕೆ ತಾವು ಹಿಂದೆ ಸರಿಯುವುದಿಲ್ಲ. ರಾಜಕೀಯ ಜೀವನದಲ್ಲಿ ಕಾಲಕಾಲಕ್ಕೆ ಇಂತಹ ಆರೋಪಗಳನ್ನು ಎದುರಿಸುವ ಪರಿಸ್ಥಿತಿ ಎದುರಾಗುತ್ತದೆ. ಸಾವಿರ ಆರೋಪಗಳು ಬಂದರೂ ಅವುಗಳನ್ನು ಎದುರಿಸಲು ಸಿದ್ಧ ಎಂದು ಸಚಿವರು ಸ್ಪಷ್ಟಪಡಿಸಿದರು.

ತಮ್ಮ ವಿರುದ್ಧ ಯಾವುದೇ ತಪ್ಪು ಆರೋಪಗಳಿದ್ದರೂ ಕಾನೂನುಬದ್ಧವಾಗಿ ಎದುರಿಸಲು ಸಿದ್ಧವಿದ್ದು, ಸಂಬಂಧಪಟ್ಟವರು ದೂರು ನೀಡಿದರೆ ತನಿಖೆಗೆ ಸಂಪೂರ್ಣ ಅವಕಾಶವಿದೆ. ಮುಂದಿನ ದಿನಗಳಲ್ಲಿಯೂ ಇಂತಹ ಆರೋಪಗಳು ಬಂದರೆ ಮುಕ್ತವಾಗಿ ಎದುರಿಸುವುದಾಗಿ ಹೇಳಿದ ಸಚಿವರು, ಸಾರ್ವಜನಿಕವಾಗಿ ಆರೋಪ ಮಾಡುವ ಬದಲು ದಾಖಲೆಗಳನ್ನು ಪೊಲೀಸರ ಮುಂದೆ ಸಲ್ಲಿಸಬೇಕು ಎಂದು ಸೂಚಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !