September 1, 2026
Tuesday, September 1, 2026
spot_img

ದೇವಸ್ಥಾನಗಳ ಒಳಗೆ ರೀಲ್ಸ್, ಸೆಲ್ಫಿ ಹಾವಳಿಗೆ ಬ್ರೇಕ್: ತಮಿಳುನಾಡು ಸರ್ಕಾರದಿಂದ ಭಕ್ತರಿಗೆ ಹೊಸ ರೂಲ್ಸ್ ಜಾರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೇವಸ್ಥಾನಗಳ ಪವಿತ್ರತೆ ಮತ್ತು ಶಾಂತತೆಯನ್ನು ಕಾಪಾಡುವ ನಿಟ್ಟಿನಲ್ಲಿ ತಮಿಳುನಾಡು ಸರ್ಕಾರ ಮಹತ್ವದ ನಿರ್ಧಾರವೊಂದನ್ನು ಜಾರಿಗೆ ತಂದಿದೆ. ಇಂದಿನಿಂದ (ಸೆ.1) ರಾಜ್ಯದ ಒಟ್ಟು 52 ಪ್ರಮುಖ ದೇವಸ್ಥಾನಗಳ ಒಳಗೆ ಮೊಬೈಲ್ ಫೋನ್‌ಗಳನ್ನು ಕೊಂಡೊಯ್ಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಮದ್ರಾಸ್ ಹೈಕೋರ್ಟ್ ನೀಡಿದ್ದ ಹಳೆಯ ನಿರ್ದೇಶನದ ಅನ್ವಯ ತಮಿಳುನಾಡು ಧಾರ್ಮಿಕ ಮತ್ತು ದತ್ತಿ ಇಲಾಖೆ (HR&CE) ಈ ಕಠಿಣ ನಿಯಮವನ್ನು ಜಾರಿಗೊಳಿಸಿದೆ. ಇತ್ತೀಚಿನ ದಿನಗಳಲ್ಲಿ ಭಕ್ತರು, ವಿಶೇಷವಾಗಿ ಯುವಕರು ದೇವಸ್ಥಾನದ ಆವರಣದಲ್ಲಿ ನಿಂತು ರೀಲ್ಸ್ ಮಾಡುವುದು, ಸೆಲ್ಫಿ ಹಾಗೂ ಫೋಟೋಗಳನ್ನು ಕ್ಲಿಕ್ಕಿಸುವುದು ಹೆಚ್ಚಾಗಿತ್ತು. ಇದು ಇತರ ಭಕ್ತರ ನೆಮ್ಮದಿಗೆ ಭಂಗ ತರುತ್ತಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಕೇವಲ 5 ರೂ.ಗೆ ಮೊಬೈಲ್ ಭದ್ರತೆ

ದೇವಸ್ಥಾನಕ್ಕೆ ಬರುವ ಭಕ್ತರ ಮೊಬೈಲ್ ಫೋನ್‌ಗಳನ್ನು ಸುರಕ್ಷಿತವಾಗಿಡಲು ಪ್ರವೇಶ ದ್ವಾರಗಳ ಬಳಿಯೇ ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯಲಾಗಿದೆ. ಪ್ರತಿ ಫೋನ್‌ಗೆ ಕೇವಲ 5 ರೂಪಾಯಿ ಶುಲ್ಕ ಪಡೆದು ಟೋಕನ್ ನೀಡಲಾಗುತ್ತಿದೆ.

ಕಾಂಚೀಪುರಂನ ದೇವರಾಜಸ್ವಾಮಿ-ಅತಿ ವರದರ್ ದೇವಸ್ಥಾನದಲ್ಲಿ ಇಂದು ಮುಂಜಾನೆ 6 ಗಂಟೆಯಿಂದಲೇ ಈ ಹೊಸ ನಿಯಮ ಆರಂಭವಾಗಿದೆ. ಇಲ್ಲಿ ಕಂಪ್ಯೂಟರ್ ಆಪರೇಟರ್‌ಗಳನ್ನು ನೇಮಕ ಮಾಡಲಾಗಿದ್ದು, ಭಕ್ತರ ಫೋಟೋ, ಮೊಬೈಲ್ ಮಾಡೆಲ್ ಹಾಗೂ ನಂಬರ್ ಅನ್ನು ಸಿಸ್ಟಮ್‌ನಲ್ಲಿ ನೋಂದಾಯಿಸಿಕೊಂಡು ಸುರಕ್ಷಿತವಾಗಿ ಇಡಲಾಗುತ್ತಿದೆ. ದರ್ಶನ ಮುಗಿಸಿ ಬಂದ ಬಳಿಕ ರಶೀದಿ ತೋರಿಸಿ ಮೊಬೈಲ್ ಮರಳಿ ಪಡೆಯಬಹುದು.

ಇದನ್ನೂ ಓದಿ:

ಎಲ್ಲೆಡೆ ಜಾಗೃತಿ ಫಲಕಗಳು

ದೇವಸ್ಥಾನಕ್ಕೆ ಬರುವ ಸಾರ್ವಜನಿಕರಿಗೆ ಮಾಹಿತಿ ನೀಡಲು ಪಾರ್ಕಿಂಗ್ ಪ್ರದೇಶ ಹಾಗೂ ಪ್ರಮುಖ ಸ್ಥಳಗಳಲ್ಲಿ ತಮಿಳು ಸೇರಿದಂತೆ ವಿವಿಧ ಭಾಷೆಗಳ ಮಾಹಿತಿ ಫಲಕಗಳನ್ನು ಹಾಕಲಾಗಿದೆ. ಧ್ವನಿವರ್ಧಕಗಳ ಮೂಲಕವೂ ನಿರಂತರವಾಗಿ ಈ ಬಗ್ಗೆ ಪ್ರಕಟಣೆ ಹೊರಡಿಸಲಾಗುತ್ತಿದೆ. ಈ ನಿಯಮವು ದೇವಸ್ಥಾನಗಳಲ್ಲಿ ಶಾಂತಿ ಹಾಗೂ ಆಧ್ಯಾತ್ಮಿಕ ವಾತಾವರಣವನ್ನು ಮರುಸ್ಥಾಪಿಸಲು ನೆರವಾಗಲಿದೆ ಎಂದು ಇಲಾಖೆ ತಿಳಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !