July 16, 2026
Thursday, July 16, 2026
spot_img

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ: ಚಿತ್ರದುರ್ಗದಲ್ಲಿ ಸಾರ್ವಜನಿಕರ ಗಮನ ಸೆಳೆದ ವಿಕಲಚೇತನರ ಬೈಕ್ ರ‍್ಯಾಲಿ!

ಹೊಸದಿಗಂತ ವರದಿ ಚಿತ್ರದುರ್ಗ

ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಸಲುವಾಗಿ ನಗರದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ವಿಕಲಚೇತನರ ಬೈಕ್ ರ‍್ಯಾಲಿ ಗಮನ ಸೆಳೆಯಿತು.

ನಗರದ ಒನಕೆ ಓಬವ್ವ ವೃತ್ತದಿಂದ ಹೊರಟ ಬೈಕ್ ರ‍್ಯಾಲಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಒನಕೆ ಓಬವ್ವ ವೃತ್ತದಿಂದ ಆರಂಭಗೊಂಡ ವಿಕಲಚೇತನರ ಬೈಕ್ ರ‍್ಯಾಲಿಯು ಮದಕರಿ ನಾಯಕ ವೃತ್ತದ ಮೂಲಕ ಸಾಗಿ ಅಂಬೇಡ್ಕರ್ ವೃತ್ತ, ಪ್ರವಾಸಿ ಮಂದಿರ ಮಾರ್ಗವಾಗಿ ಗಾಂಧಿ ವೃತ್ತ, ಸಂಗೋಳ್ಳಿ ರಾಯಣ್ಣ ವೃತ್ತದವರೆಗೂ ಸಾಗಿ ನಂತರ ಪುನಃ ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲಿ ಮುಕ್ತಾಯವಾಯಿತು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್ ಮಾತನಾಡಿ, ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಕೈಗೊಳ್ಳಲು ಅಧಿಸೂಚನೆ ಹೊರಡಿಸಿ, ವೇಳಾಪಟ್ಟಿ ಪ್ರಕಟಿಸಿದೆ. ಈ ಸಂಬಂಧ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಎಸ್‌ಐಆರ್ ಕುರಿತು ಹೆಚ್ಚಿನ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಬೈಕ್ ರ್ಯಾಲಿಯು ನಗರದ ಮುಖ್ಯರಸ್ತೆ ಹಾಗೂ ಮಾರುಕಟ್ಟೆ ಪ್ರದೇಶಗಳ ಮೂಲಕ ಹಾದು ಹೋಗುವ ಈ ರ್ಯಾಲಿಯು ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಉಂಟು ಮಾಡಲಿ. ಪ್ರತಿಯೊಬ್ಬ ಅರ್ಹ ಮತದಾರರು ತಮ್ಮ ತಮ್ಮ ಗಣತಿ ನಮೂನೆಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲಾತಿಗಳೊಂದಿಗೆ ನಿಗಧಿತ ಅವಧಿಯಲ್ಲಿ ಪುನಃ ಬಿಎಲ್‌ಒಗಳಿಗೆ ಫಾರಂಗಳನ್ನು ಸಲ್ಲಿಸಬೇಕು. ಎಸ್‌ಐಆರ್ ಕುರಿತ ಸಂಪೂರ್ಣ ಮಾಹಿತಿ ಎಲ್ಲರಿಗೂ ತಲುಪಲಿ ಎಂದು ಆಶಿಸಿದರು.

2026ರ ಎಸ್‌ಐಆರ‍್ನಲ್ಲಿ ಭಾಗವಹಿಸಿ, ಯಾವುದೇ ಅರ್ಹ ಮತದಾರ ಹೊರಗುಳಿಯಬಾರದು. ಯಾವುದೇ ಅನರ್ಹ ಮತದಾರ ಸೇರ್ಪಡೆ ಆಗಬಾರದು. ದೋಷರಹಿತ ಮತದಾರರ ಪಟ್ಟಿ ಬಲವಾದ ಪ್ರಜಾಪ್ರಭುತ್ವ, ಗಣತಿ ನಮೂನೆ ದ್ವಿಪ್ರತಿಯಲ್ಲಿ ವಿತರಣೆ, ಇತ್ತೀಚಿನ ಭಾವಚಿತ್ರವನ್ನು ನವೀಕರಿಸಿಕೊಳ್ಳುವ ಅವಕಾಶ, ಗಣತಿ ನಮೂನೆ ಭರ್ತಿ ಮಾಡಿ ಸಹಿ ಮಾಡಿ ಬಿಎಲ್‌ಒಗೆ ನೀಡಿ ಒಂದು ಪ್ರತಿಯನ್ನು ನಿಮ್ಮ ಬಳಿ ಉಳಿಸಿಕೊಳ್ಳಿ, ನಿಮ್ಮ ಸಹಕಾರ ನಿಖರ ಮತದಾರರ ಪಟ್ಟಿಗೆ ಅವಶ್ಯಕ, ಹೆಚ್ಚಿನ ಮಾಹಿತಿಗೆ ೧೯೫೦/೧೮೦೦೪೨೫೫೧೯೫೦, ಗಣತಿ ನಮೂನೆ ಭರ್ತಿಗಾಗಿ ಮತದಾರ ಸಹಾಯ ಕೇಂದ್ರಗಳನ್ನು ಬಳಸಿ ಎಂಬ ಘೋಷಣೆ ಫಲಕಗಳ ಹಿಡಿದು, ಘೋಷಣೆ ಕೂಗುವ ಮೂಲಕ ಎಸ್‌ಐಆರ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

ಇದನ್ನೂ ಓದಿ:

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಸಿ.ಎಸ್.ಗಾಯತ್ರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯಕುಮಾರ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ, ಚಿತ್ರದುರ್ಗ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೈ.ರವಿಕುಮಾರ್, ಚಿತ್ರದುರ್ಗ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ಸೇರಿದಂತೆ ವಿಕಲಚೇತನರು ಹಾಜರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !