July 16, 2026
Thursday, July 16, 2026
spot_img

ಬಿ.ಸಿ. ರೋಡ್ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಮಚ್ಚಿನಿಂದ ಕಡಿದು ಯುವತಿಯ ಬರ್ಬರ ಕೊ*ಲೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಯುವತಿಯೋರ್ವಳನ್ನು ದುಷ್ಕರ್ಮಿಯೋರ್ವ ಮಚ್ಚಿನಿಂದ ಮಾರಣಾಂತಿಕವಾಗಿ ಕಡಿದು ಕೊಲೆಗೈದ ಆಘಾತಕಾರಿ ಘಟನೆ ಗುರುವಾರ ಸಂಜೆ ನಡೆದಿದೆ.

ಬಂಟ್ವಾಳ ತಾಲೂಕು ಕಕ್ಕೆಪದವಿನ ಮೈರಾ ನಿವಾಸಿ ಲಾವಣ್ಯ ಎಂಬಾಕೆ ಸಾವನ್ನಪ್ಪಿದ ಯುವತಿ ಎಂದು ತಿಳಿದುಬಂದಿದೆ. ಪೊಲೀಸ್ ಮಾಹಿತಿ ಪ್ರಕಾರ ಚೇತನ್ ಎಂಬಾತ ಈ ಕೃತ್ಯ ನಡೆಸಿದ್ದಾನೆ. ಈತ ಯುವತಿಯ ದೂರದ ಸಂಬಂಧಿಯಾಗಿದ್ದು, ಆಕೆಯನ್ನು ಏಕಮುಖವಾಗಿ ಪ್ರೀತಿಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಯುವತಿ ಕಲ್ಲಡ್ಕದ ನರ್ಸಿಂಗ್ ಹೋಮ್ ವೊಂದರಲ್ಲಿ ಕೆಲಸ ಮುಗಿಸಿ ಬಿ.ಸಿ. ರೋಡ್ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಬಂದು ಬಸ್ ಹತ್ತುತ್ತಿದ್ದಂತೆ ಮಚ್ಚು ಝಳಪಿಸಿಕೊಂಡು ಬಂದ ಯುವಕ, ಆಕೆಯ ಕತ್ತಿನ ಭಾಗಕ್ಕೆ ಬೀಸಿದ್ದಾನೆ. ಅಪಾಯದ ಅರಿವಾದ ಯುವತಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆಕೆಯನ್ನು ಬಸ್ ನಿಲ್ದಾಣದಲ್ಲಿಯೇ ಬೆನ್ನತ್ತಿ ಮಚ್ಚಿನಿಂದ ಬರ್ಬರವಾಗಿ ಕಡಿದಿದ್ದಾನೆ. ಪರಿಣಾಮ ಆಕೆ ಗಂಭೀರ ಗಾಯಗೊಂಡಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲು ಯತ್ನಿಸಲಾಯಿತಾದರೂ ಆಕೆ ಸಾವನ್ನಪ್ಪಿದ್ದಾಳೆ. ಹಂತಕ ಕೃತ್ಯದ ಬಳಿಕ ಮಚ್ಚನ್ನು ಸ್ಥಳದಲ್ಲೆ ಬಿಟ್ಟು ಪರಾರಿಯಾಗಿದ್ದಾನೆ.

ಇದನ್ನೂ ಓದಿ:


ಸುದ್ದಿ ತಿಳಿದ ಜಿಲ್ಲಾ ಎಸ್ಪಿ ಡಾ. ಅರುಣ್ ಕುಮಾರ್, ಡಿವೈಎಸ್ಪಿ ಯಶುಕುಮಾರ್, ಇನ್ಸ್ ಪೆಕ್ಟರ್ ಅನಂತಪದ್ಮನಾಭ ಸಹಿತ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಆರೋಪಿಯ ಬಂಧನ ಕಾರ್ಯಾಚರಣೆಗೆ ಮಾರ್ಗದರ್ಶನ ನೀಡಿದ್ದಾರೆ. ಈ ಘಟನೆಗೆ ಸಂಬಂಧಿಸಿ ಆರೋಪಿಯ ಪತ್ತೆಗಾಗಿ ವಿಶೇಷ ಪೊಲೀಸ್ ತಂಡ ರಚಿಸಲಾಗುವುದು, ತನಿಖೆ ಮುಂದುವರಿದಿದೆ ಎಂದು ಎಸ್ಪಿ ಡಾ. ಅರುಣ್ ಕುಮಾರ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !