ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿಗೆ ಭಾರಿ ರಾಜಕೀಯ ಆಘಾತ ಎದುರಾಗಿದ್ದು, ಪಕ್ಷದ ಪ್ರಮುಖ ನಾಯಕಿ ಹಾಗೂ ರಾಜ್ಯಸಭಾ ಸಂಸದೆ ಕೋಯಲ್ ಮಲ್ಲಿಕ್ ತಮ್ಮ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ. ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಭಿನ್ನಮತ ತಾರಕಕ್ಕೇರಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಕೋಯಲ್ ಮಲ್ಲಿಕ್ ದಿಢೀರ್ ನಿರ್ಧಾರ:
ಇತ್ತೀಚಿನ ದಿನಗಳಲ್ಲಿ ಪಕ್ಷದ ಉನ್ನತ ನಾಯಕತ್ವದ ನಿರ್ಧಾರಗಳ ಬಗ್ಗೆ ಅಸಮಾಧಾನ ಹೊಂದಿದ್ದ ಸಂಸದೆ ಕೋಯಲ್ ಮಲ್ಲಿಕ್, ಇಂದು ತಮ್ಮ ರಾಜ್ಯಸಭಾ ಸದಸ್ಯತ್ವಕ್ಕೆ ಅಧಿಕೃತವಾಗಿ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ತೃಣಮೂಲ ಕಾಂಗ್ರೆಸ್ ಬಲವರ್ಧನೆಗೆ ಶ್ರಮಿಸುತ್ತಿದ್ದ ಮಮತಾ ಬ್ಯಾನರ್ಜಿ ಅವರಿಗೆ ಸಂಸದೆಯ ಈ ದಿಢೀರ್ ನಿರ್ಗಮನವು ರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಹಿನ್ನಡೆಯನ್ನುಂಟು ಮಾಡಿದೆ.
ಇದನ್ನೂ ಓದಿ:
ಟಿಎಂಸಿ ಪಕ್ಷದಲ್ಲಿ ಹೆಚ್ಚಿದ ಆಂತರಿಕ ಭಿನ್ನಮತ
ಪಶ್ಚಿಮ ಬಂಗಾಳದಲ್ಲಿ ಮುಂಬರುವ ರಾಜಕೀಯ ಬೆಳವಣಿಗೆಗಳ ದೃಷ್ಟಿಯಿಂದ ಟಿಎಂಸಿ ಪಕ್ಷದ ಪ್ರಮುಖ ನಾಯಕರು ಬೇರೆ ಆಪ್ಷನ್ಗಳನ್ನು ಹುಡುಕುತ್ತಿದ್ದಾರೆ ಎಂಬ ವದಂತಿಗಳು ದಟ್ಟವಾಗಿದ್ದವು. ಅದರ ಮೊದಲ ಹಂತವಾಗಿ ಈ ರಾಜೀನಾಮೆ ಹೊರಬಿದ್ದಿದೆ ಎನ್ನಲಾಗಿದೆ. ಕೋಯಲ್ ಮಲ್ಲಿಕ್ ತಮ್ಮ ಸಂಸದೆ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಅವರು ಮುಂದಿನ ದಿನಗಳಲ್ಲಿ ಕಮಲ ಪಾಳಯ ಸೇರಲಿದ್ದಾರೆಯೇ ಅಥವಾ ಬೇರೆ ರಾಜಕೀಯ ನಿರ್ಧಾರ ಕೈಗೊಳ್ಳಲಿದ್ದಾರೆಯೇ ಎಂಬ ಕುತೂಹಲ ತೀವ್ರಗೊಂಡಿದೆ.



