July 17, 2026
Friday, July 17, 2026
spot_img

ದಳಪತಿ ವಿಜಯ್ ‘ಜನ ನಾಯಗನ್’ ಸಿನಿಮಾದಲ್ಲಿ ಅಂಬೇಡ್ಕರ್ ಸಂಭಾಷಣೆಗೆ ಕತ್ತರಿ ಬಿದ್ದಿದ್ದೇಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ ದಳಪತಿ ವಿಜಯ್ ನಟನೆಯ ಬಹುನಿರೀಕ್ಷಿತ ರಾಜಕೀಯ ಹಿನ್ನೆಲೆಯುಳ್ಳ ‘ಜನ್ ನಾಯಗನ್’ ಸಿನಿಮಾ ಕೊನೆಗೂ ಬಿಡುಗಡೆಗೆ ಸಜ್ಜಾಗಿದೆ. ಈ ವರ್ಷದ ಜನವರಿಯಲ್ಲೇ ತೆರೆಕಾಣಬೇಕಿದ್ದ ಈ ಚಿತ್ರವು, ಸೆನ್ಸಾರ್ ಮಂಡಳಿಯ ತೀವ್ರ ವಿರೋಧ ಹಾಗೂ ಪ್ರಮಾಣಪತ್ರ ನಿರಾಕರಣೆಯಿಂದಾಗಿ ತಡವಾಗಿತ್ತು. ಕೊನೆಗೆ ಚಿತ್ರತಂಡ ನ್ಯಾಯಾಲಯದ ಮೊರೆ ಹೋಗಿ ಸುದೀರ್ಘ ಹೋರಾಟ ನಡೆಸಿದ ಫಲವಾಗಿ, ಜುಲೈ 23ರಂದು ಚಿತ್ರ ಜಾಗತಿಕವಾಗಿ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ.

ಅಂಬೇಡ್ಕರ್ ಸಂಭಾಷಣೆಗೆ ಬಿದ್ದ ಕತ್ತರಿ

ಸಿನಿಮಾಗೆ ಸೆನ್ಸಾರ್ ಮಂಡಳಿಯು ಹಲವು ದೃಶ್ಯ ಹಾಗೂ ಸಂಭಾಷಣೆಗಳಿಗೆ ಕತ್ತರಿ ಹಾಕಿದೆ. ಚಿತ್ರದಲ್ಲಿ ಮಕ್ಕಳಿಗೆ ಸಂವಿಧಾನದ ಮಹತ್ವವನ್ನು ಸರಳವಾಗಿ ತಿಳಿಸುವ, “ಅಂಬೇಡ್ಕರ್ ಸಂವಿಧಾನ ಫಾಲೋ ಮಾಡದಿದ್ದರೆ, ಟಿವಿಕೆ ಸಂವಿಧಾನದ ಮೂಲಕ ಪಾಠ ಕಲಿಸಬೇಕಾಗುತ್ತದೆ” ಎಂಬ ಪ್ರಮುಖ ಸಂಭಾಷಣೆಯನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಈ ಕುರಿತು ಮಾತನಾಡಿದ ನಿರ್ಮಾಪಕ ವೆಂಕಟ್ ಕೆ. ನಾರಾಯಣ್, ಸೃಜನಶೀಲ ಸ್ವಾತಂತ್ರ್ಯ ಮತ್ತು ನಿಯಮಗಳ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಸವಾಲಾಗಿತ್ತು ಎಂದಿದ್ದಾರೆ.

ಮೂಲ ಕಥೆಗೆ ಧಕ್ಕೆಯಿಲ್ಲ

ಸಾರ್ವಜನಿಕ ಭಾವನೆಗಳಿಗೆ ಧಕ್ಕೆಯಾಗದಂತೆ ಸಿಬಿಎಫ್‌ಸಿ ಸೂಚಿಸಿದ ಎಲ್ಲಾ ಬದಲಾವಣೆಗಳನ್ನು ಪಾಲಿಸಲಾಗಿದೆ ಎಂದು ನಿರ್ಮಾಪಕರು ಸ್ಪಷ್ಟಪಡಿಸಿದ್ದಾರೆ. ಆದರೆ, ಈ ಸೆನ್ಸಾರ್ ಕಟ್‌ನಿಂದಾಗಿ ಸಿನಿಮಾದ ಮೂಲ ಕಥಾಹಂದರಕ್ಕಾಗಲಿ ಅಥವಾ ಅದರ ತೀವ್ರತೆಗಾಗಲಿ ಯಾವುದೇ ಧಕ್ಕೆ ಉಂಟಾಗಿಲ್ಲ ಎಂದು ಚಿತ್ರತಂಡ ಭರವಸೆ ನೀಡಿದೆ. ವಿಜಯ್ ಅವರ ಕೊನೆಯ ಚಿತ್ರ ಎನ್ನಲಾದ ಈ ರಾಜಕೀಯ ಆಕ್ಷನ್ ಡ್ರಾಮಾ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದ್ದು, ಸಮಾಜಮುಖಿ ದೃಶ್ಯಗಳಿಗೆ ಕತ್ತರಿ ಬಿದ್ದಿದ್ದಕ್ಕೆ ಕೆಲವರು ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !