July 17, 2026
Friday, July 17, 2026
spot_img

ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಇಡಿ ಬಿಗ್ ಆ್ಯಕ್ಷನ್: ಬಿಹಾರ, ದೆಹಲಿ ಸೇರಿ 8 ಕಡೆ ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಹಾರದಲ್ಲಿ ನಡೆದಿರುವ ಬಹುಕೋಟಿ ಮೌಲ್ಯದ ಅಕ್ರಮ ಮರಳು ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಮಹತ್ವದ ಕಾರ್ಯಾಚರಣೆ ಕೈಗೊಂಡಿದೆ. ಬಿಹಾರ, ದೆಹಲಿ ಮತ್ತು ರಾಜಸ್ಥಾನದ ಒಟ್ಟು ಎಂಟು ಸ್ಥಳಗಳಲ್ಲಿ ಏಕಕಾಲಕ್ಕೆ ಶೋಧ ನಡೆಸಲಾಗಿದ್ದು, ಹಣ ಅಕ್ರಮ ವರ್ಗಾವಣೆ ಹಾಗೂ ಅಕ್ರಮ ಗಣಿಗಾರಿಕೆ ಸಂಬಂಧ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.

ಮೂರು ರಾಜ್ಯಗಳಲ್ಲಿ ಇಡಿ ದಾಳಿ

ಇಡಿ ಪಟ್ನಾ ವಲಯದ ಅಧಿಕಾರಿಗಳು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA) ಅಡಿ ಕಾರ್ಯಾಚರಣೆ ನಡೆಸಿದ್ದಾರೆ. ಬಿಹಾರದ ಬಂಕಾ ಮತ್ತು ಪಟ್ನಾ, ದೆಹಲಿ-ಎನ್‌ಸಿಆರ್, ರಾಜಸ್ಥಾನದ ಶ್ರೀಗಂಗಾನಗರ ಹಾಗೂ ಜೈಪುರ ಸೇರಿ ಎಂಟು ಸ್ಥಳಗಳಲ್ಲಿ ಶೋಧ ನಡೆದಿದೆ. ಈ ಕಾರ್ಯಾಚರಣೆ ಮಹಾದೇವ್ ಎನ್‌ಕ್ಲೇವ್ ಪ್ರೈವೇಟ್ ಲಿಮಿಟೆಡ್‌ಗೆ ಸಂಬಂಧಿಸಿದ ಆಸ್ತಿಗಳು ಮತ್ತು ಕಚೇರಿಗಳನ್ನು ಕೇಂದ್ರವಾಗಿಸಿಕೊಂಡಿದೆ.

ಇದನ್ನೂ ಓದಿ:

ಐಐಟಿ ವರದಿಯಲ್ಲಿ ಬಹಿರಂಗವಾದ ಅಕ್ರಮ

ತನಿಖೆಯ ಭಾಗವಾಗಿ ಇಡಿ, ಬಿಹಾರದ ಬಂಕಾ ಜಿಲ್ಲೆಯ ನದಿ ಮರಳು ಘಾಟ್‌ಗಳ ಕುರಿತು ಐಐಟಿ ಪಟ್ನಾದಿಂದ ಭೂ-ಸ್ಥಳೀಯ (Geospatial) ವಿಶ್ಲೇಷಣೆ ನಡೆಸಿಸಿತ್ತು. ವರದಿಯ ಪ್ರಕಾರ, 2015-16ರಿಂದ 2022-23ರ ಅವಧಿಯಲ್ಲಿ ಕಂಪನಿಯು ಭಾರೀ ಪ್ರಮಾಣದಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸಿದ್ದು, ಅದರ ಅಂದಾಜು ಮೌಲ್ಯ ₹131 ಕೋಟಿಗೂ ಅಧಿಕ ಎಂದು ತಿಳಿದುಬಂದಿದೆ.

ಎಫ್‌ಐಆರ್ ಬಳಿಕ ತನಿಖೆ ಮತ್ತಷ್ಟು ಚುರುಕು

ಐಐಟಿ ವರದಿಯ ಆಧಾರದ ಮೇಲೆ ಇಡಿ ಸಂಬಂಧಿತ ಮಾಹಿತಿಯನ್ನು ಬಿಹಾರ ರಾಜ್ಯ ಗಣಿ ನಿಗಮಕ್ಕೆ ಹಂಚಿಕೊಂಡಿತ್ತು. ಬಳಿಕ ರಾಜ್ಯದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಪ್ರಕರಣ ದಾಖಲಿಸಿದ್ದು, ಅದನ್ನೇ ಆಧಾರವಾಗಿ ಇಡಿ ಹಣ ಅಕ್ರಮ ವರ್ಗಾವಣೆ ಆಯಾಮದಲ್ಲೂ ತನಿಖೆ ಮುಂದುವರಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !