July 17, 2026
Friday, July 17, 2026
spot_img

ಮುರುಡೇಶ್ವರ ದೇವಸ್ಥಾನದ ಹೆಸರಲ್ಲಿ ಆನ್‌ಲೈನ್ ದೋಖಾ: ಪೊಲೀಸರ ಬಲೆಗೆ ಬಿದ್ದ ಖದೀಮ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕರಾವಳಿಯ ಪ್ರಸಿದ್ಧ ಪುಣ್ಯಕ್ಷೇತ್ರವಾದ ಮುರುಡೇಶ್ವರ ದೇವಾಲಯದ ಹೆಸರನ್ನು ದುರುಪಯೋಗಪಡಿಸಿಕೊಂಡು ಆನ್‌ಲೈನ್‌ನಲ್ಲಿ ನಕಲಿ ಲಕ್ಕಿ ಡ್ರಾ ದಂಧೆ ನಡೆಸುತ್ತಿದ್ದ ಬೃಹತ್ ಜಾಲವನ್ನು ಮುರುಡೇಶ್ವರ ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಕಾರ್ಯಾಚರಣೆ ನಡೆಸಿರುವ ಪೊಲೀಸರು ಬೀದರ್ ಮೂಲದ ನರಸಿಂಗ್ ವೆಂಕಟರಾವ್ ತಗರಖೇಡೆ ಎಂಬ ಆರೋಪಿಯನ್ನು ಹೆಡೆಮುರಿ ಕಟ್ಟಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ವಂಚನೆಯ ಜಾಲ:

ಬಂಧಿತ ಆರೋಪಿ ನರಸಿಂಗ್ ವೆಂಕಟರಾವ್, ಮುರುಡೇಶ್ವರ ದೇವಸ್ಥಾನದ ಹೆಸರನ್ನು ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಭಿತ್ತಿಪತ್ರಗಳನ್ನು ಸೃಷ್ಟಿಸುತ್ತಿದ್ದ. “ಮುರುಡೇಶ್ವರ ದೇವಸ್ಥಾನದ ಲಕ್ಕಿ ಡ್ರಾ” ಎಂದು ನಂಬಿಸಿ ಸಾರ್ವಜನಿಕರಿಂದ ಡಿಜಿಟಲ್ ಪೇಮೆಂಟ್ ಮೂಲಕ ಭಾರಿ ಪ್ರಮಾಣದ ಹಣ ವಸೂಲಿ ಮಾಡಿ ವಂಚಿಸುತ್ತಿದ್ದ ಎನ್ನಲಾಗಿದೆ.

ದೇವಸ್ಥಾನದ ಆಡಳಿತ ಮಂಡಳಿಯಿಂದ ದೂರು:

ದೇವಸ್ಥಾನದ ಹೆಸರಿನಲ್ಲಿ ಸಾರ್ವಜನಿಕ ವಲಯದಲ್ಲಿ ಇಂತಹದ್ದೊಂದು ನಕಲಿ ಲಾಟರಿ ದಂಧೆ ನಡೆಯುತ್ತಿರುವುದು ಮುರುಡೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಗಮನಕ್ಕೆ ಬಂದಿದೆ. ತಕ್ಷಣ ಕಾರ್ಯಪ್ರವೃತ್ತರಾದ ಮಂಡಳಿಯ ಸದಸ್ಯರು ಪೊಲೀಸರಿಗೆ ಅಧಿಕೃತ ದೂರು ನೀಡಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ತನಿಖೆ ಚುರುಕುಗೊಳಿಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ;

ಭಕ್ತರಿಗೆ ಪೊಲೀಸ್ ಇಲಾಖೆಯಿಂದ ಪ್ರಮುಖ ಮನವಿ:

ಧಾರ್ಮಿಕ ಕೇಂದ್ರಗಳ ಹೆಸರಿನಲ್ಲಿ ಆನ್‌ಲೈನ್‌ನಲ್ಲಿ ನಡೆಯುವ ಇಂತಹ ಯಾವುದೇ ಲಕ್ಕಿ ಡ್ರಾ ಅಥವಾ ಲಾಟರಿಗಳ ಅಧಿಕೃತತೆಯನ್ನು ಪರಿಶೀಲಿಸದೆ ಸಾರ್ವಜನಿಕರು ಹಣ ಕಳೆದುಕೊಳ್ಳಬಾರದು. ಭಕ್ತರು ಇಂತಹ ಸೋಷಿಯಲ್ ಮೀಡಿಯಾ ವಂಚನೆಗಳ ಬಗ್ಗೆ ಸದಾ ಜಾಗೃತರಾಗಿರಬೇಕು ಎಂದು ಮುರುಡೇಶ್ವರ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !