ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟಿ ಶೈಲಜಾ ಶ್ರೀಶೈಲನ್ ವಯೋಸಹಜ ಅನಾರೋಗ್ಯದಿಂದ ಜುಲೈ 16ರಂದು ಮಧ್ಯಾಹ್ನ ನಿಧನರಾಗಿದ್ದಾರೆ. ಬೆಂಗಳೂರಿನ ವೈಯ್ಯಾಲಿಕಾವಲ್ನಲ್ಲಿರುವ ತಮ್ಮ ನಿವಾಸದಲ್ಲಿ ಅವರು ಕೊನೆಯುಸಿರೆಳೆದಿದ್ದು, ಹಿರಿಯ ನಟ ಶ್ರೀಶೈಲನ್ ಧರ್ಮಪತ್ನಿಯಾಗಿದ್ದ ಶೈಲಜಾ ಅವರು ಪುತ್ರ ಶ್ರೀಕಾಂತ್ ಹಾಗೂ ಪುತ್ರಿ ಶ್ರೀವಾಣಿ ಸೇರಿದಂತೆ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ.
ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಅಪಾರ ಸಾಧನೆ:
ಶೈಲಜಾ ಶ್ರೀಶೈಲನ್ ಕನ್ನಡ ಚಿತ್ರರಂಗದಲ್ಲಿ ನೂರಾರು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ವಿಶೇಷವಾಗಿ ರಿಯಲ್ ಸ್ಟಾರ್ ಉಪೇಂದ್ರ ಬಹುತೇಕ ಸಿನಿಮಾಗಳಲ್ಲಿ ತಾಯಿ ಪಾತ್ರ ಸೇರಿದಂತೆ ಹಲವು ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದರು.
ಪ್ರಮುಖ ಸಿನಿಮಾಗಳು:
‘ಎ’, ‘ಉಪ್ಪಿ 2’, ‘ಪುಟ್ಟ ಹೆಂಡ್ತಿ’, ‘ಗೃಹಪ್ರವೇಶ’, ‘ಬಾರೆ ನನ್ನ ಮುದ್ದಿನ ರಾಣಿ’ ಮತ್ತು ‘ಅನಂತನ ಅವಾಂತರ’ ಮುಂತಾದ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ.
ಜನಪ್ರಿಯ ಧಾರಾವಾಹಿಗಳು:
ಬೆಳ್ಳಿಪರದೆ ಮಾತ್ರವಲ್ಲದೆ ಟಿಎನ್ ಸೀತಾರಾಂ ನಿರ್ದೇಶನದ ಸೂಪರ್ ಹಿಟ್ ಮೆಗಾ ಸೀರಿಯಲ್ ‘ಮುಕ್ತ’ ಹಾಗೂ ‘ಮಾಯಾಮೃಗ’ ಸೇರಿದಂತೆ ಪ್ರಮುಖ ಕಿರುತೆರೆಯ ಧಾರಾವಾಹಿಗಳಲ್ಲೂ ಅದ್ಭುತವಾಗಿ ನಟಿಸಿದ್ದರು.
ಇದನ್ನೂ ಓದಿ;
ಅಂತ್ಯಸಂಸ್ಕಾರ ನೆರವೇರಿಕೆ:
ಬೆಂಗಳೂರಿನ ಶ್ರೀರಾಂಪುರದ ವಿದ್ಯುತ್ ಚಿತಾಗಾರದಲ್ಲಿ ಹಿರಿಯ ನಟಿಯ ಅಂತ್ಯಸಂಸ್ಕಾರವನ್ನು ನೆರವೇರಿಸಲಾಗಿದೆ. ಶೈಲಜಾ ಶ್ರೀಶೈಲನ್ ನಿಧನಕ್ಕೆ ಸ್ಯಾಂಡಲ್ವುಡ್ನ ಪ್ರಮುಖ ಗಣ್ಯರು, ಕಲಾವಿದರು ಹಾಗೂ ಕಿರುತೆರೆಯ ತಾರೆಯರು ತೀವ್ರ ಸಂತಾಪ ಸೂಚಿಸಿದ್ದಾರೆ.



