ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ-ಅಮೆರಿಕ ರಕ್ಷಣಾ ಸಹಭಾಗಿತ್ವಕ್ಕೆ ಮತ್ತೊಂದು ಮಹತ್ವದ ಬಲ ಸಿಕ್ಕಿದೆ. ಅಮೆರಿಕ ನಿರ್ಮಿತ ಅತ್ಯಾಧುನಿಕ MH-60R ಸೀಹಾಕ್ ನೌಕಾ ಹೆಲಿಕಾಪ್ಟರ್ಗಳಲ್ಲಿ ಒಂದು ಈಗಾಗಲೇ ಭಾರತೀಯ ನೌಕಾಪಡೆಗೆ ಹಸ್ತಾಂತರವಾಗಿದ್ದು, ಇನ್ನೆರಡು ಹೆಲಿಕಾಪ್ಟರ್ಗಳು ಇದೇ ವಾರ ಭಾರತ ತಲುಪಲಿವೆ.
ನೌಕಾಪಡೆಯ ಸಾಮರ್ಥ್ಯ ಮತ್ತಷ್ಟು ವೃದ್ಧಿ
ಲಾಕ್ಹೀಡ್ ಮಾರ್ಟಿನ್ ನಿರ್ಮಿಸಿರುವ MH-60R ಸೀಹಾಕ್ ಹೆಲಿಕಾಪ್ಟರ್ಗಳು ಜಲಾಂತರ್ಗಾಮಿ ಪತ್ತೆ, ಸಮುದ್ರ ಮೇಲಿನ ದಾಳಿ, ಕಣ್ಗಾವಲು, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಸೇರಿದಂತೆ ಹಲವು ಕಾರ್ಯಗಳಿಗೆ ಬಳಸಲಾಗುತ್ತದೆ. ದೀರ್ಘ ವ್ಯಾಪ್ತಿಯ ಸೆನ್ಸರ್ಗಳು ಮತ್ತು ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಈ ಹೆಲಿಕಾಪ್ಟರ್ಗಳು ಭಾರತದ ಸಾಗರ ಭದ್ರತೆಯನ್ನು ಮತ್ತಷ್ಟು ಬಲಪಡಿಸಲಿವೆ.
ಇದನ್ನೂ ಓದಿ:
2020ರ ಒಪ್ಪಂದದ ಫಲ
ಭಾರತವು 2020ರಲ್ಲಿ ಅಮೆರಿಕದೊಂದಿಗೆ ವಿದೇಶಿ ಸೇನಾ ಮಾರಾಟ (FMS) ಒಪ್ಪಂದದಡಿ ಈ ಹೆಲಿಕಾಪ್ಟರ್ಗಳನ್ನು ಖರೀದಿಸಿತ್ತು. ಬಳಿಕ 2021ರಲ್ಲಿ ಮೊದಲ ಸೀಹಾಕ್ ಅನ್ನು ಭಾರತೀಯ ನೌಕಾಪಡೆ ಸೇರ್ಪಡೆಗೊಳಿಸಿತ್ತು. ಕೊಚ್ಚಿಯ ಐಎನ್ಎಸ್ ಗರುಡದಲ್ಲಿ ಮೊದಲ ಸ್ಕ್ವಾಡ್ರನ್ ಕಾರ್ಯಾರಂಭ ಮಾಡಿದ್ದು, ಇದು ನೌಕಾಪಡೆಯ ಆಧುನೀಕರಣದಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಆಪರೇಷನ್ ಸಿಂದೂರ್ ನಲ್ಲೂ ಬಳಕೆ
ನೌಕಾಪಡೆಯ ಮಾಹಿತಿ ಪ್ರಕಾರ, MH-60R ಸೀಹಾಕ್ ಹೆಲಿಕಾಪ್ಟರ್ಗಳನ್ನು ‘ಆಪರೇಷನ್ ಸಿಂದೂರ್’ ವೇಳೆ ಯಶಸ್ವಿಯಾಗಿ ಬಳಸಲಾಗಿತ್ತು. ಈ ಹೆಲಿಕಾಪ್ಟರ್ಗಳ ಕಾರ್ಯಕ್ಷಮತೆ ಬಗ್ಗೆ ಭಾರತೀಯ ನೌಕಾಪಡೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಇವು ಸಮುದ್ರ ಭದ್ರತೆಯಲ್ಲಿ ಇನ್ನಷ್ಟು ಪ್ರಮುಖ ಪಾತ್ರವಹಿಸುವ ನಿರೀಕ್ಷೆಯಿದೆ.



