July 17, 2026
Friday, July 17, 2026
spot_img

ನಾಯಕ ಸಮುದಾಯದ ಮೀಸಲಾತಿ ಅನ್ಯಾಯದ ವಿರುದ್ಧ ಹೋರಾಟ: ಚಳ್ಳಕೆರೆಯಲ್ಲಿ ಬೃಹತ್ ಜಾಗೃತಿ ಸಮಾವೇಶ!

ಹೊಸದಿಗಂತ ವರದಿ ಚಿತ್ರದುರ್ಗ:

ನಾಯಕ ಸಮುದಾಯಕ್ಕೆ ಸಂವಿಧಾನಬದ್ಧವಾಗಿ ನೀಡಬೇಕಾಗಿದ್ದ ಮೀಸಲಾತಿ ವಿಚಾರದಲ್ಲಿ ಅನ್ಯಾಯವಾಗಿದೆ. ಹಾಗಾಗಿ ಜುಲೈ 19ರಂದು ಚಳ್ಳಕೆರೆಯಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಎಸ್.ಟಿ. ಮೋರ್ಚಾ ಕಾರ್ಯದರ್ಶಿ ಕಾಲುವೇಹಳ್ಳಿ ಮಹಾಂತೇಶ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸಂವಿಧಾನಕ್ಕೆ ಅನುಗುಣವಾಗಿ ಯಾವುದೇ ಸರ್ಕಾರಗಳು ಮೀಸಲಾತಿ ನೀಡುತ್ತಿಲ್ಲ. 2022 ಅಕ್ಟೋಬರ್‌ನಲ್ಲಿ ಬಿಜೆಪಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಎಸ್.ಸಿ. ಮೀಸಲಾತಿ ಶೇಕಡಾ 15 ರಿಂದ 17ಕ್ಕೆ, ಎಸ್.ಟಿ. ಮೀಸಲಾತಿ ಶೇಕಡಾ 3 ರಿಂದ 7 ಕ್ಕೆ ಹೆಚ್ಚಿಸುವ ನಿರ್ಧಾರ ಕೈಗೊಂಡರು. ಅದೇ ಸಂದರ್ಭದಲ್ಲಿ ಸರ್ವಪಕ್ಷಗಳ ಸಭೆ ಕರೆದು ಅಭಿಪ್ರಾಯ ಪಡೆದಿದ್ದರು ಎಂದರು.

ಸರ್ಕಾರದಲ್ಲಿ ವಾಲ್ಮೀಕಿ ಜನಾಂಗಕ್ಕೆ ಮೀಸಲಾತಿ ನೀಡಿ ವಿಧೇಯಕ ಶಾಸನಸಭೆಯ ಒಪ್ಪಿಗೆ ಪಡೆದು ರಾಜ್ಯಪಾಲರ ಅಂಗೀಕಾರವಾಗಿತ್ತು, ಕಾಂಗ್ರೆಸ್ ಸರ್ಕಾರ ಇದನ್ನು ಜಾರಿಗೊಳಿಸದೆ, ಮೋಸ ಮಾಡುತ್ತಿದೆ ಎಂದು ದೂರಿದ ಅವರು. ಮೀಸಲಾತಿಯನ್ನು ಹೆಚ್ಚಿಸಿ ಕಾನೂನಾತ್ಮಕ ಹಾಗೂ ಶಾಸನಬದ್ಧ ಅಧಿಕಾರ ನೀಡಿದ್ದ ಸರಕಾರದ ಆಶಯವನ್ನು ನಾವು ಜನರಿಗೆ ತಿಳಿಸುವಲ್ಲಿ ವಿಫಲರಾಗಿದ್ದೇವೆ. ಕಾಂಗ್ರೆಸ್ ಸರಕಾರವು ಮೀಸಲಾತಿ ವಿಷಯದಲ್ಲಿ ಅಪಪ್ರಚಾರ ಮಾಡಿ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.

ಕಳೆದ 30 ವರ್ಷಗಳಿಂದಲೂ ಮೀಸಲಾತಿ ನೀಡುವಂತೆ ಹೋರಾಟ ನಡೆಸುತ್ತಾ ಬಂದಿದ್ದರೂ ಸರಕಾರಗಳು ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡುವಲ್ಲಿ ವಿಫಲವಾಗಿವೆ. ಇದರಲ್ಲಿ ಕಳೆದ ಆಡಳಿತದ ಬಿಜೆಪಿ ಮೀಸಲಾತಿ ಹೆಚ್ಚಿಸಿತ್ತು. ಕಾಂಗ್ರೆಸ್ ಸರಕಾರಕ್ಕೆ ಮೀಸಲಾತಿ ನೀಡುವ ಇಚ್ಚಾಶಕ್ತಿಯ ಕೊರತೆ ಇದೆ. ಹಾಗಾಗಿ ನಾಯಕ ಸಮಾಜವನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ಜುಲೈ 19 ರಂದು ಚಳ್ಳಕೆರೆಯಲ್ಲಿ ಜಾಗೃತಿ ಸಮಾವೇಶ ನಡೆಸಲಾಗುತ್ತಿದೆ. ಈ ಸಮಾವೇಶಕ್ಕೆ ಸಮುದಾಯದ ಎಲ್ಲರೂ ಪಕ್ಷಾತೀತವಾಗಿ ಆಗಮಿಸಿ ಒಗ್ಗಟ್ಟು ಪ್ರದರ್ಶಿಸಬೇಕಿದೆ ಎಂದು ಮನವಿ ಮಾಡಿದರು.

ಇದನ್ನೂ ಓದಿ:

ಸುದ್ದಿಗೋಷ್ಠಿಯಲ್ಲಿ ಎಸ್.ಟಿ. ಮೋರ್ಚಾದ ಜಿಲ್ಲಾಧ್ಯಕ್ಷ ಜೆ.ಬಿ.ರಾಜು, ಎಸ್‌ಟಿ ಮೋರ್ಚಾ ಕಾರ್ಯಕಾರಣಿ ಮಾಜಿ ಸದಸ್ಯರಾದ ಪಾಪೇಶ್ ನಾಯಕ್, ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಮ್‌ದಾಸ್, ಜಿಲ್ಲಾ ಕಾರ್ಯದರ್ಶಿ ಪಾಲಯ್ಯ, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೆ, ರಾಜ್ಯ ಎಸ್.ಟಿ. ಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ ಕವನ ರಾಘವೇಂದ್ರ, ಕಾಂಚನ ಭಾಗವಹಿಸಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !