ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈ–ಅಹಮದಾಬಾದ್ ಬುಲೆಟ್ ರೈಲು ಯೋಜನೆ ವಿಳಂಬವಾಗುತ್ತಿದೆ ಎಂಬ ಜಪಾನ್‌ನ ಮಾಜಿ ಸಚಿವರ ಹೇಳಿಕೆಗೆ ಭಾರತ ಸ್ಪಷ್ಟನೆ ನೀಡಿದೆ. ಕಾಮಗಾರಿ ನಿಗದಿತ ಯೋಜನೆಯಂತೆ ಸಾಗುತ್ತಿದ್ದು, ಈ ಆರೋಪವು ವೈಯಕ್ತಿಕ ಅಭಿಪ್ರಾಯ ಮಾತ್ರ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಯೋಜನೆಯನ್ನು ಶೀಘ್ರ ಪೂರ್ಣಗೊಳಿಸುವ ನಿಟ್ಟಿನಲ್ಲಿ ಭಾರತ ಮತ್ತು ಜಪಾನ್ ನಿರಂತರವಾಗಿ ಸಹಕಾರ ಮುಂದುವರಿಸಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.
‘ಇದು ವೈಯಕ್ತಿಕ ಅಭಿಪ್ರಾಯ’
ಜಪಾನ್ ಮಾಜಿ ಸಚಿವರ ಹೇಳಿಕೆಯನ್ನು ಉಲ್ಲೇಖಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಅದು ಯಾವುದೇ ಅಧಿಕೃತ ನಿಲುವಲ್ಲ ಎಂದು ಸ್ಪಷ್ಟಪಡಿಸಿದೆ. ಯೋಜನೆಗೆ ಸಂಬಂಧಿಸಿದಂತೆ ಭಾರತ ಮತ್ತು ಜಪಾನ್ ನಡುವೆ ಉತ್ತಮ ಮಟ್ಟದ ಸಮನ್ವಯವಿದ್ದು, ಕಾಮಗಾರಿ ವೇಗವಾಗಿ ಮುಂದುವರಿದಿದೆ ಎಂದು ತಿಳಿಸಿದೆ.
ಇದನ್ನೂ ಓದಿ:
2027ರಲ್ಲೇ ಮೊದಲ ಹಂತ ಆರಂಭ ಗುರಿ
ಬುಲೆಟ್ ರೈಲು ಯೋಜನೆಯ ಮೊದಲ ಹಂತವನ್ನು 2027ರಲ್ಲಿ ಸಾರ್ವಜನಿಕ ಸೇವೆಗೆ ತೆರೆಯುವ ಗುರಿ ಹೊಂದಲಾಗಿದೆ. ಜಪಾನ್ ಅಭಿವೃದ್ಧಿಪಡಿಸುತ್ತಿರುವ ಹೊಸ ತಲೆಮಾರಿನ ರೈಲುಗಳನ್ನು ನಂತರದ ಹಂತದಲ್ಲಿ ಭಾರತಕ್ಕೆ ಒದಗಿಸುವ ಯೋಜನೆಯೂ ಮುಂದುವರಿದಿದೆ ಎಂದು ಸರ್ಕಾರ ತಿಳಿಸಿದೆ.
ಸಿಗ್ನಲಿಂಗ್ ವಿವಾದಕ್ಕೂ ಉತ್ತರ
ಯೋಜನೆಯ ಸಿಗ್ನಲಿಂಗ್ ವ್ಯವಸ್ಥೆಯಲ್ಲಿ ಜಪಾನ್‌ಗೆ ಅವಕಾಶ ನೀಡಿಲ್ಲ ಎಂಬ ಆರೋಪವನ್ನೂ ಕೇಂದ್ರ ತಳ್ಳಿಹಾಕಿದೆ. ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಅಗತ್ಯ ಉಪಕರಣಗಳನ್ನು ಆಯ್ಕೆ ಮಾಡಲಾಗಿದ್ದು, ಈ ಕುರಿತು ಜಪಾನ್‌ನಿಂದ ಯಾವುದೇ ಅಧಿಕೃತ ಪ್ರಸ್ತಾವ ಬಂದಿರಲಿಲ್ಲ ಎಂದು ಸ್ಪಷ್ಟಪಡಿಸಿದೆ.



