- ವೀರೇಂದ್ರ ನಾಗಲದಿನ್ನಿ
ವಿಶ್ವ ಪರಂಪರಿಕ ತಾಣ ಹಂಪಿ ಪರಿಸರದಲ್ಲಿ ಸ್ವಚ್ಛತೆಯನ್ನು ಕಾಪಾಡಲು ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ (ಹವಾಮಾ) ಮತ್ತು ಭಾರತೀಯ ಪುರಾತತ್ವ ಇಲಾಖೆ ಜಂಟಿಯಾಗಿ ಮಹತ್ವದ ಹೆಜ್ಜೆ ಇಟ್ಟಿವೆ. ಹಂಪಿ ಪ್ರಮುಖ ಪಾರ್ಕಿಂಗ್ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಕ್ರಷಿಂಗ್(ಪುಡಿಗಟ್ಟುವ) ಯಂತ್ರಗಳನ್ನು ಅಳವಡಿಕೆಗೆ ಮುಂದಾಗಿದ್ದು, ಪ್ರವಾಸಿಗರು ಹಾಗೂ ಸ್ಥಳೀಯರು ನಿರುಪಯುಕ್ತ ಪ್ಲಾಸ್ಟಿಕ್ ಬಾಟಲ್‌ಗಳನ್ನು ಈ ಯಂತ್ರಕ್ಕೆ ಹಾಕಿದರೆ 1 ರೂ. ಪಡೆಯಬಹುದು.
ವಿಶ್ವವಿಖ್ಯಾತ ಹಂಪಿ ವೀಕ್ಷಣೆಗಾಗಿ ದೇಶ-ವಿದೇಶಗಳಿಂದ ಪ್ರತಿನಿತ್ಯ ಸಾವಿರಾರು ಜನ ಪ್ರವಾಸಿಗರು ಆಗಮಿಸುತ್ತಾರೆ. ಬಯಲು ವಸ್ತು ಸಂಗ್ರಹಾಲಯ ಎಂಬ ಖ್ಯಾತಿ ಪಡೆದಿರುವ ಹಂಪಿಯಲ್ಲಿ ಹತ್ತಾರು ಕಡೆ ಇರುವ ದೇವಸ್ಥಾನಗಳು, ಸ್ಮಾರಕಗಳಿಂದಾಗಿ ಜನರು ಒಂದೆಡೆಯಿಂದ ಮತ್ತೊಂದು ಕಡೆ ಸಂಚರಿಸುವುದು ಅನಿವಾರ್ಯ. ಈ ವೇಳೆ ಎಲ್ಲೆಂದರಲ್ಲಿ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲಿಗಳನ್ನು ಬಿಸಾಡುವುದರಿಂದ ಹಂಪಿಯಲ್ಲಿ ಸ್ವಚ್ಚತಯೇ ಸವಾಲು ಎಂಬಂತಾಗಿದೆ.
ಜೊತೆಗೆ ಕೊಳೆಯದ, ಮಣ್ಣಲ್ಲಿ ಮಣ್ಣಾಗದ ಪ್ಲಾಸ್ಟಿಕ್ ನಿರ್ವಹಣೆಯೇ ಸ್ಥಳೀಯ ಆಡಳಿತಕ್ಕೆ ತಲೆ ನೋವಾಗಿದೆ. ಈ ಹಿನ್ನೆಲೆಯಲ್ಲಿ ಹಂಪಿ ಪರಿಸರದಲ್ಲಿ ಪ್ಲಾಸ್ಟಿಕ್ ಬಾಟಲ್ ಕ್ರಶಿಂಗ್ ಯಂತ್ರಗಳನ್ನು ವಳವಡಿಕೆಗೆ ಹವಾಮಾ, ಎಎಸ್‌ಐ ಅಧಿಕಾರಿಗಳು ಮುಂದಾಗಿದ್ದಾರೆ.

ಜಿರೋ ಕಾಸ್ಟ್- ಜಿರೋ ಪ್ಲಾಸ್ಟಿಕ್!
ಪ್ರವಾಸಿಗರು ಹೆಚ್ಚು ಭೇಟಿ ನೀಡುವ ಗೆಜ್ಜಲ ಮಂಪಟ, ವಿರೂಪಾಕ್ಷ ದೇವಸ್ಥಾನ, ಕ್ವೀನ್ಸ್ ಬಾತ್, ಕಡಲೆಕಾಳು ಗಣೇಶ, ಮಹಾನವಮಿ ದಿಪ್ಪ ಸೇರಿದಂತೆ ಪ್ರಮುಖ 7- 8 ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಕ್ರಶಿಂಗ್ ಯಂತ್ರಗಳನ್ನು ಅಳವಡಿಸಲಾಗುತ್ತಿದೆ. ಈಗಾಗಲೇ ಪ್ಲಾಸ್ಟಿಕ್ ರಿಸೈಕ್ಲಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಕಂಪನಿಯೊಂದು ಈ ಯಂತ್ರಗಳನ್ನು ಅಳವಡಿಸುತ್ತಿದೆ. ಯಂತ್ರದಲ್ಲಿ ಪುಡಿಯಾಗಿರುವ ಪ್ಲಾಸ್ಟಿಕ್ ಅನ್ನು ಸುಲಭವಾಗಿ ಮರುಬಳಕೆಗೆ ಸಾಗಿಸುತ್ತದೆ. ಈ ಯೋಜನೆಗೆ ಸರ್ಕಾರದಿಂದ ಯಾವುದೇ ಅನುದಾನ ನೀಡಲಾಗುತ್ತಿಲ್ಲ. ಕಂಪನಿಯ ಯಂತ್ರಗಳ ಅಳವಡಿಕೆಗೂ ಭೂ ಬಾಡಿಕೆ ವಿಧಿಸಿಲ್ಲ. ಇದು ಸಂಪೂರ್ಣ ಜಿರೋ ಕಾಸ್ಟ್, ಜಿರೋ ಪ್ಲಾಸ್ಟಿಕ್ ಎಂಬ ನೀತಿಯನ್ನು ಹೊಂದಿದೆ ಎನ್ನುತ್ತಾರೆ ಎಎಸ್‌ಐ ಅಧಿಕಾರಿಗಳು.
1 ರೂ. ಪ್ರೋತ್ಸಾಹ ಧನ
ಪ್ರವಾಸಿಗರು ಬಳಸಿದ ಖಾಲಿ ಪ್ಲಾಸ್ಟಿಕ್ ಬಾಟಲಿಯನ್ನು ಈ ಯಂತ್ರದ ಒಂದು ಭಾಗದಲ್ಲಿ ಹಾಕಿದರೆ ಸಾಕು ಮತ್ತೊಂದು ಕಿಂಡಿಯಿಂದ 1 ರೂ. ನಾಣ್ಯ ದೊರೆಯುತ್ತದೆ. ಈ ಮೂಲಕ ಸಾರ್ವಜನಿಕರಲ್ಲಿ ಪ್ಲಾಸ್ಟಿಕ್ ಬಾಟಲಿಗಳ ವೈಜ್ಞಾನಿಕ ವಿಲೇವಾರಿ ಕುರಿತು ಜಾಗೃತಿ ಮೂಡಿಸುವ ಸದುದ್ದೇಶದಿಂದ 1 ರೂ. ಪ್ರೋತ್ಸಾಹ ಧನ ನೀಡಲಾಗುತ್ತದೆ. ಪರಿಣಾಮ ಬೇಕಾಬಿಟ್ಟಿಯಾಗಿ ಪ್ಲಾಸ್ಟಿಕ್ ಬಾಟಲಿಗಳನ್ನು ಎಸೆಯವುದು ಕಡಿಮೆಯಾಗುತ್ತದೆ. ತ್ಯಾಜ್ಯ ಬಾಟಲಿಗಳನ್ನು ಸಂಗ್ರಹಿಸಲು ಸರ್ಕಾರದ ಅನುದಾನ ಬಳಕೆ ಮಾಡುವುದೂ ತಪ್ಪುತ್ತದೆ ಎನ್ನುತ್ತಾರೆ ಅಧಿಕಾರಿಗಳು.
ಕಸದ ಪ್ರಮಾಣವನ್ನು ಶೂನ್ಯಕ್ಕೆ ಇಳಿಯಲಿದೆ
ಈ ಕುರಿತು ಮಾತನಾಡಿರುವ ಎಎಸ್‌ಐ ಅಧೀಕ್ಷಕ ರಾಮಕೃಷ್ಣ ರೆಡ್ಡಿ, ಹಂಪಿ ಪರಿಸರದಲ್ಲಿ ಪ್ಲಾಸ್ಟಿಕ್ ಬಾಟಲಿಗಳ ನಿರ್ವಹಣೆ ಬಹುದೊಡ್ಡ ಸವಾಲಾಗಿದೆ. ಇತರೆ ತ್ಯಾಜ್ಯಕ್ಕಿಂತ ಪ್ಲಾಸ್ಟಿಕ್ ಬಾಟಲ್‌ಗಳು ಹೆಚ್ಚು ಕಾಣಿಸುತ್ತಿದ್ದು, ಹಂಪಿ ಸೌಂದರ್ಯಕ್ಕೆ ಧಕ್ಕೆತರುತ್ತದೆ. ಹೀಗಾಗಿ ಪ್ಲಾಸ್ಟಿಕ್ ಕ್ರಶಿಂಗ್ ಯಂತ್ರಗಳ ಅಳವಡಿಕೆಯಿಂದ ಐತಿಹಾಸಿಕ ಸ್ಮಾರಕಗಳ ಸುತ್ತಮುತ್ತ ಪ್ಲಾಸ್ಟಿಕ್ ಕಸದ ಪ್ರಮಾಣವನ್ನು ಶೂನ್ಯಕ್ಕೆ ಇಳಿಯಲಿದೆ. ಪ್ರತಿ ಬಾಟಲಿಗೆ 1 ರೂ. ಪ್ರೋತ್ಸಾಹ ಧನ ದೊರೆಯುವುದರಿಂದ ಸ್ಥಳೀಯರೂ ಉತ್ಸಾಹ ತೋರಬಹುದು. 10- 15 ದಿನಗಳಲ್ಲಿ ಈ ಯೋಜನೆ ಅಧಿಕೃತವಾಗಿ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ ಎಂದರು.



