July 18, 2026
Saturday, July 18, 2026
spot_img

ನದಿ, ಡ್ಯಾಂ ಪಕ್ಕದಲ್ಲಿದ್ದರೂ ಕುಡಿಯುವ ನೀರಿಲ್ಲ: ಶಿವಮೊಗ್ಗ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಅಕ್ಕಪಕ್ಕದಲ್ಲೇ ನದಿ, ಡ್ಯಾಂ ಇದ್ದರೂ ಕುಡಿಯುವ ನೀರಿಲ್ಲದೆ ಜನ ಪರದಾಡುವ ಸ್ಥಿತಿ ಉಂಟಾಗಿದೆ. ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ನಗರದ ಮಂಡ್ಲಿ ಕಲ್ಲೂರು ನಿವಾಸಿಗಳ ಇಂದಿನ ದುಸ್ಥಿತಿಯಾಗಿದೆ. ತುಂಗಾ ನದಿ ತುಂಬಿ ಹರಿಯುತ್ತಿದ್ದರೂ, ಕಣ್ಣೆದುರೇ ಡ್ಯಾಂ ಇದ್ದರೂ ಇಲ್ಲಿನ ಜನರು ಹನಿ ನೀರಿಗೂ ಜೀವದ ಹಂಗು ತೊರೆದು ಹೋರಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಮಂಡ್ಲಿ ಕಲ್ಲೂರಿನ ಸುಮಾರು 57 ಕುಟುಂಬಗಳು ಕಳೆದ ಹಲವು ದಿನಗಳಿಂದ ತೀವ್ರ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿವೆ. ಕಣ್ಣೆದುರೇ ನೀರಿದ್ದರೂ ಕುಡಿಯಲು ಯೋಗ್ಯವಾದ ನೀರು ಸಿಗದೆ ನಿವಾಸಿಗಳು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.

ಕೆಟ್ಟು ನಿಂತ ಬೋರ್‌ವೆಲ್‌ಗಳು:

ಗ್ರಾಮದಲ್ಲಿದ್ದ ಬೋರ್‌ವೆಲ್‌ಗಳು ಕೆಟ್ಟು ಹೋಗಿದ್ದು, ದುರಸ್ತಿ ಮಾಡಲು ಅಧಿಕಾರಿಗಳು ಮುಂದಾಗಿಲ್ಲ. ಪಾಲಿಕೆ ವತಿಯಿಂದ ಕಳುಹಿಸುವ ಟ್ಯಾಂಕರ್ ನೀರು ಇಡೀ ಗ್ರಾಮಕ್ಕೆ ಸಾಲುತ್ತಿಲ್ಲ. ನೀರು ಬಂದಾಗ ಕೊಡ ಹಿಡಿಯಲು ಜನ ಮುಗಿಬೀಳುವ ಸ್ಥಿತಿ ಇದೆ.

ಕಲುಷಿತ ನೀರು ಬಳಕೆ:

ಬೇರೆ ದಾರಿಯಿಲ್ಲದೆ ಜನರು ಕಲುಷಿತಗೊಂಡಿರುವ ತುಂಗಾ ಕಾಲುವೆ ನೀರನ್ನೇ ಕುಡಿಯಲು ಮತ್ತು ಅಡುಗೆಗೆ ಬಳಸುತ್ತಿದ್ದಾರೆ. ಇದರಿಂದಾಗಿ ಗ್ರಾಮದಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಆವರಿಸಿದ್ದು, ಹಲವರು ಈಗಾಗಲೇ ರೋಗಗಳಿಗೆ ತುತ್ತಾಗಿದ್ದಾರೆ.

ಇದನ್ನೂ ಓದಿ;

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ

ನದಿ ಮತ್ತು ಜಲಾಶಯದ ಪಕ್ಕದಲ್ಲೇ ಇದ್ದರೂ ನಮಗೆ ಕುಡಿಯುವ ನೀರು ಒದಗಿಸಲು ಸಾಧ್ಯವಾಗದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇದ್ದು ಪ್ರಯೋಜನವಿಲ್ಲ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿತ್ಯ ನೀರಿಗಾಗಿ ಮಂಡಿ ಊರಿ ಬೇಡುವ ಸ್ಥಿತಿ ಬಂದಿದ್ದು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನರ ಜೀವಕ್ಕೆ ಅಪಾಯ ಎದುರಾಗಿದೆ. ತಕ್ಷಣವೇ ಈ ಭಾಗಕ್ಕೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !