July 18, 2026
Saturday, July 18, 2026
spot_img

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ: ‘ಆರ್ಟಿಕಲ್ 370’ ಶ್ರೇಷ್ಠ, ಮಮ್ಮೂಟ್ಟಿ-ಕಾರ್ತಿಕ್ ಸೂಪರ್, ಮಿಥ್ಯ, ತುಳು ಇಂಬುಗೂ ಮಣೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಸರ್ಕಾರ 2024ನೇ ಸಾಲಿನ ಚಿತ್ರಗಳಿಗೆ ನೀಡುವ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಮಂಗಳವಾರ ಪ್ರಕಟಿಸಿದ್ದು, ಕನ್ನಡಕ್ಕೆ ಮೂರು ರಾಷ್ಟ್ರೀಯ ಗೌರವ ಒಲಿದುಬಂದಿದೆ. ಜೊತೆಗೆ ಈ ಬಾರಿ ಹಿಂದಿ, ತಮಿಳು, ತೆಲುಗು, ಕನ್ನಡ, ಮಲಯಾಳಂ ಸೇರಿದಂತೆ ವಿವಿಧ ಭಾಷೆಗಳ ಚಿತ್ರಗಳು ಹಲವು ಪ್ರಮುಖ ವಿಭಾಗಗಳಲ್ಲಿ ಪ್ರಶಸ್ತಿ ಬಾಚಿಕೊಂಡಿವೆ.

ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಆರ್ಟಿಕಲ್ 370 ಚಿತ್ರಕ್ಕೆ ಲಭಿಸಿದ್ದು, ಯಾಮಿ ಗೌತಮ್ ಇದೇ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬ್ರಹ್ಮಯುಗಂ ಚಿತ್ರದ ಅಭಿನಯಕ್ಕಾಗಿ ಮಮ್ಮೂಟ್ಟಿ ಹಾಗೂ ಚಂದು ಚಾಂಪಿಯನ್ ಚಿತ್ರದ ಅಭಿನಯಕ್ಕಾಗಿ ಕಾರ್ತಿಕ್ ಆರ್ಯನ್ ಜಂಟಿಯಾಗಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ.

ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಅಮರನ್ ಚಿತ್ರದ ನಿರ್ದೇಶಕ ರಾಜ್‌ಕುಮಾರ್ ಪೆರಿಯಸಾಮಿ ಅವರಿಗೆ ಸಂದಿದೆ. ಸ್ವಾತಂತ್ರ್ಯ ವೀರ್ ಸಾವರ್ಕರ್ ಚಿತ್ರದ ಮೂಲಕ ರಂದೀಪ್ ಹೂಡಾ ಅತ್ಯುತ್ತಮ ಪ್ರಥಮ ನಿರ್ದೇಶಕ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಮನರಂಜನೆಯ ಜೊತೆಗೆ ಮೌಲ್ಯಯುತ ಸಂದೇಶ ನೀಡಿದ ಜನಪ್ರಿಯ ಚಿತ್ರ ವಿಭಾಗದಲ್ಲಿ ಕಲ್ಕಿ 2898 AD ಪ್ರಶಸ್ತಿ ಪಡೆದಿದೆ. ರಾಷ್ಟ್ರೀಯ, ಸಾಮಾಜಿಕ ಮತ್ತು ಪರಿಸರ ಮೌಲ್ಯಗಳನ್ನು ಉತ್ತೇಜಿಸಿದ ಚಿತ್ರವಾಗಿ ಕ್ಯಾಪ್ಟನ್ ಮಿಲ್ಲರ್ ಆಯ್ಕೆಯಾಗಿದೆ. ಮಕ್ಕಳ ವಿಭಾಗದಲ್ಲಿ ತೆಲುಗಿನ ‘35 – ಚಿನ್ನ ಕಥಾ ಕಾಡು ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಕನ್ನಡಕ್ಕೆ ಮೂರು ರಾಷ್ಟ್ರೀಯ ಗೌರವ

ಕನ್ನಡ ಚಿತ್ರರಂಗಕ್ಕೂ ಈ ಬಾರಿ ಮಹತ್ವದ ಸಾಧನೆ ಸಿಕ್ಕಿದೆ. ಅತ್ಯುತ್ತಮ ಕನ್ನಡ ಚಲನಚಿತ್ರವಾಗಿ ಮಿಥ್ಯ, ಅತ್ಯುತ್ತಮ ಪೋಷಕ ನಟಿಯಾಗಿ ಅದೇ ಚಿತ್ರದ ನಟನೆಗೆ ರೂಪಶ್ರೀ ವರ್ಕಾಡಿ ಅವರಿಗೆ ಹಾಗೂ ಅತ್ಯುತ್ತಮ ಬಾಲ ಕಲಾವಿದನಾಗಿ ಅಥೀಶ್ ಎಸ್. ಶೆಟ್ಟಿಗೆ ಪ್ರಶಸ್ತಿ ಒಲಿದುಬಂದಿದೆ. ಇದರೊಂದಿಗೆ ಕನ್ನಡ ಸಿನಿಮಾ ರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ.

ಇತರೆ ಪ್ರಮುಖ ಪ್ರಶಸ್ತಿಗಳು:

ಅತ್ಯುತ್ತಮ ಪೋಷಕ ನಟ: ಸಂಜಯ್ ಮಿಶ್ರಾ (ಭಕ್ಷಕ್), ಅತ್ಯುತ್ತಮ ಛಾಯಾಗ್ರಹಣಕ್ಕಾಗಿ ಬ್ರಹ್ಮಯುಗಂಗೆ, ಅತ್ಯುತ್ತಮ ಸಂಕಲನಕ್ಕಾಗಿ ಅಮರಾನ್ ಗೆ, ಅತ್ಯುತ್ತಮ ನಿರ್ಮಾಣ ವಿನ್ಯಾಸ: ಕಲ್ಕಿ 2898 AD, ಅತ್ಯುತ್ತಮ ವಸ್ತ್ರ ವಿನ್ಯಾಸ: ಪುಷ್ಪ ದಿ ರೂಲ್ ಪಾರ್ಟ್ 2, ಅತ್ಯುತ್ತಮ ಮೇಕಪ್:ಕಮಿಟಿ ಕುರ್ರೋಲ್, ಅತ್ಯುತ್ತಮ ನೃತ್ಯ ಸಂಯೋಜನೆ: ಸ್ತ್ರೀ 2ರ ಹಾಡು: ಆಜ್ ಕಿ ರಾತ್, ಅತ್ಯುತ್ತಮ ಸಾಹಸ ನಿರ್ದೇಶನ: ಮಹಾರಾಜಾ, ಅತ್ಯುತ್ತಮ ಧ್ವನಿ ವಿನ್ಯಾಸ: ಭೂಲ್ ಭುಲಯ್ಯ 3ಗೆ ಲಭಿಸಿದೆ.
ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ: ಅಭಯ್ ಜೋಧ್‌ಪುರ್ಕರ್ (ಘರತ್ ಗಣಪತಿ), ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ: ವೈಕೋಂ ವಿಜಯಲಕ್ಷ್ಮಿ (ಈ.ಆರ್. ಎಂ), ಅತ್ಯುತ್ತಮ ಗೀತರಚನೆ: ಮನೋಜ್ ಮುಂತಶೀರ್ (ಮೈದಾನ್), ಅತ್ಯುತ್ತಮ ಸಂಗೀತ ನಿರ್ದೇಶನ (ಹಾಡುಗಳು): ಶಶ್ವತ್ ಸಚ್‌ದೇವ್ (ಆರ್ಟಿಕಲ್ 370), ಅತ್ಯುತ್ತಮ ಹಿನ್ನೆಲೆ ಸಂಗೀತ: ಜಿ.ವಿ. ಪ್ರಕಾಶ್ ಕುಮಾರ್ (ಅಮರಾನ್)ಗೆ ಲಭಿಸಿದೆ.

ಪ್ರಾದೇಶಿಕ ಭಾಷೆಗಳ ಅತ್ಯುತ್ತಮ ಚಿತ್ರಗಳು

ಪ್ರಾದೇಶಿಕ ಭಾಷೆಗಳ ವಿಭಾಗದಲ್ಲಿ ಶ್ರೀಕಾಂತ್ (ಹಿಂದಿ), ರಾಯನ್ (ತಮಿಳು), ಕಮಿಟಿ ಕುರೊಲ್ಲ್ (ತೆಲುಗು),ಫೆಮಿನಿಚಿ ಫಾತಿಮಾ (ಮಲಯಾಳಂ), ಮಿಥ್ಯ (ಕನ್ನಡ), ಮೋಗ್ ಆಸುಂ (ಕೊಂಕಣಿ), ‘ಜುಯಿಫುಲ್ (ಅಸ್ಸಾಮಿ) ಸೇರಿದಂತೆ ವಿವಿಧ ಭಾಷೆಗಳ ಚಿತ್ರಗಳು ಪ್ರಶಸ್ತಿ ಪಡೆದಿವೆ. ತುಳು ಚಿತ್ರರಂಗಕ್ಕೂ ಹೆಮ್ಮೆಯ ಕ್ಷಣ ಒದಗಿದ್ದು, ‘IMBU’ ಚಿತ್ರ ಅತ್ಯುತ್ತಮ ತುಳು ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿದೆ.

ಇದನ್ನೂ ಓದಿ:



ಪ್ರಶಸ್ತಿ ಪಟ್ಟಿ ಪ್ರಕಟಿಸುವ ಸಂದರ್ಭದಲ್ಲಿ ಫೀಚರ್ ಫಿಲ್ಮ್ ವಿಭಾಗದ ತೀರ್ಪುಗಾರರ ಅಧ್ಯಕ್ಷ ಜಯರಾಜ್, ನಾನ್-ಫೀಚರ್ ವಿಭಾಗದ ಅಧ್ಯಕ್ಷ ಅಸೀಮ್ ಸಿನ್ಹಾ, ಸಿನೆಮಾ ಕುರಿತ ಬರಹಗಳ ವಿಭಾಗದ ಅಧ್ಯಕ್ಷ ಎ. ಚಂದ್ರಶೇಖರ್ ಉಪಸ್ಥಿತರಿದ್ದರು. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧಿಕಾರಿಗಳ ಸಮ್ಮುಖದಲ್ಲಿ ಪ್ರಶಸ್ತಿಗಳನ್ನು ಅಧಿಕೃತವಾಗಿ ಘೋಷಿಸಲಾಯಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !