November 1, 2026
Sunday, November 1, 2026
spot_img

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗೆ 10 ರೂ. ಹೆಚ್ಚಳ: ವಿಮಾನ ಇಂಧನವೂ ದುಬಾರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಹಬ್ಬದ ಸಂಭ್ರಮದ ನಡುವೆಯೇ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಮತ್ತು ವಿಮಾನ ಇಂಧನದ ಬೆಲೆ ಹೆಚ್ಚಳವಾಗಿದೆ. 19 ಕೆ.ಜಿ. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರವನ್ನು 10 ರೂ ಹೆಚ್ಚಿಸಲಾಗಿದ್ದು, ಭಾನುವಾರದಿಂದ ಹೊಸ ದರ ಜಾರಿಗೆ ಬಂದಿದೆ. ಇದರಿಂದ ಹೋಟೆಲ್, ರೆಸ್ಟೋರೆಂಟ್ ಹಾಗೂ ಇತರ ವಾಣಿಜ್ಯ ಸಂಸ್ಥೆಗಳ ವೆಚ್ಚ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

ಪ್ರಮುಖ ನಗರಗಳಲ್ಲಿ ಹೊಸ ದರ

ದೆಹಲಿಯಲ್ಲಿ 19 ಕೆ.ಜಿ. ಸಿಲಿಂಡರ್ ದರ 2,820ಕ್ಕೆ ಏರಿದೆ. ಮುಂಬೈನಲ್ಲಿ 2,775, ಚೆನ್ನೈನಲ್ಲಿ 2,994.50 ಹಾಗೂ ಕೋಲ್ಕತ್ತಾದಲ್ಲಿ 2,971ಕ್ಕೆ ತಲುಪಿದೆ. ಕೋಲ್ಕತ್ತಾದಲ್ಲಿ 17ರಷ್ಟು ಹೆಚ್ಚಳ ದಾಖಲಾಗಿದೆ.

ಅಕ್ಟೋಬರ್ 1ರಂದು ವಾಣಿಜ್ಯ ಸಿಲಿಂಡರ್ ದರ 62.50 ಹೆಚ್ಚಿಸಲಾಗಿತ್ತು. ಸೆಪ್ಟೆಂಬರ್‌ನಲ್ಲಿ 9.50 ಏರಿಕೆಯಾಗಿತ್ತು. ಜುಲೈ ಮತ್ತು ಆಗಸ್ಟ್‌ನಲ್ಲಿ ಸತತ ಇಳಿಕೆ ಕಂಡಿದ್ದ ದರಗಳು ಇದೀಗ ಮತ್ತೆ ಎರಡು ತಿಂಗಳಿಂದ ಏರುತ್ತಿವೆ. ಹೊಸ ಸಂಪರ್ಕದ 5 ಕೆ.ಜಿ. ಎಫ್‌ಟಿಎಲ್ ಸಿಲಿಂಡರ್ ದರ 1,903 ಆಗಿದ್ದು, ರೀಫಿಲ್ ದರ 782ಕ್ಕೆ ನಿಗದಿಯಾಗಿದೆ.

ವಿಮಾನ ಇಂಧನಕ್ಕೂ ಬೆಲೆ ಏರಿಕೆ

ವಿಮಾನಯಾನ ಸಂಸ್ಥೆಗಳು ಬಳಸುವ ಏವಿಯೇಷನ್ ಟರ್ಬೈನ್ ಫ್ಯೂಯೆಲ್ (ಎಟಿಎಫ್) ದರವನ್ನು ಪ್ರತಿ ಲೀಟರ್‌ಗೆ 1.37 ಹೆಚ್ಚಿಸಲಾಗಿದೆ. ಇದರಿಂದ ದರ 138.50ಕ್ಕೆ ತಲುಪಿದೆ. ಇದು ಸತತ ನಾಲ್ಕನೇ ತಿಂಗಳ ಏರಿಕೆಯಾಗಿದೆ.

ಇದನ್ನೂ ಓದಿ:

ವಿಮಾನಯಾನ ಸಂಸ್ಥೆಗಳ ಒಟ್ಟು ಕಾರ್ಯಾಚರಣಾ ವೆಚ್ಚದಲ್ಲಿ ಇಂಧನದ ಪಾಲು ಸುಮಾರು ಶೇ.40ರಷ್ಟಿರುವುದರಿಂದ, ಈ ಹೆಚ್ಚಳವು ವಿಮಾನಯಾನ ಕಂಪನಿಗಳ ಮೇಲಿನ ಆರ್ಥಿಕ ಒತ್ತಡವನ್ನು ಹೆಚ್ಚಿಸಬಹುದು.

ಮನೆ ಬಳಕೆಯ ಗ್ಯಾಸ್, ಪೆಟ್ರೋಲ್–ಡೀಸೆಲ್ ದರ ಸ್ಥಿರ

ಗೃಹಬಳಕೆಯ 14.2 ಕೆ.ಜಿ. ಎಲ್‌ಪಿಜಿ ಸಿಲಿಂಡರ್ ದರ 942ರಲ್ಲೇ ಮುಂದುವರಿದಿದೆ. ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲೂ ಯಾವುದೇ ಬದಲಾವಣೆ ಮಾಡಲಾಗಿಲ್ಲ.

Must Read

Skip to toolbar