July 18, 2026
Saturday, July 18, 2026
spot_img

CINE| ದೆಹಲಿಯಲ್ಲಿ ಸ್ಯಾಂಡಲ್‌ವುಡ್ ಗತ್ತು: ‘ರಾಮಾಯಣ’ ವೇದಿಕೆಯಲ್ಲಿ ಕನ್ನಡ ಪ್ರೇಮ ಮೆರೆದ ರಾಕಿಂಗ್ ಸ್ಟಾರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಸ್ಯಾಂಡಲ್‌ವುಡ್‌ನ ರಾಕಿಂಗ್ ಸ್ಟಾರ್ ಯಶ್ ಮತ್ತೊಮ್ಮೆ ರಾಷ್ಟ್ರ ಮಟ್ಟದ ವೇದಿಕೆಯಲ್ಲಿ ತಮ್ಮ ಮಾತೃಭಾಷಾ ಪ್ರೇಮ ಮೆರೆದಿದ್ದಾರೆ. ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ಅಪಾರ ಕುತೂಹಲ ಮೂಡಿಸಿರುವ ‘ರಾಮಾಯಣ’ ಸಿನಿಮಾದ ವಿಶೇಷ ಕಾರ್ಯಕ್ರಮ ದೆಹಲಿಯಲ್ಲಿ ನಡೆದಿದ್ದು, ವೇದಿಕೆ ಏರಿದ ಯಶ್ ತಮ್ಮ ಭಾಷಣವನ್ನು ಕನ್ನಡದಲ್ಲೇ ಆರಂಭಿಸುವ ಮೂಲಕ ಕನ್ನಡಿಗರ ಹೃದಯ ಗೆದ್ದಿದ್ದಾರೆ.

4,000 ಕೋಟಿ ರೂಪಾಯಿ ಬಂಡವಾಳದ ದೃಶ್ಯ ವೈಭವ!

ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ದುಬಾರಿ ಬಜೆಟ್‌ನಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಬರೋಬ್ಬರಿ 4,000 ಕೋಟಿ ರೂಪಾಯಿಗಳ ಬೃಹತ್ ಬಂಡವಾಳದೊಂದಿಗೆ ಜಾಗತಿಕ ಮಟ್ಟದಲ್ಲಿ ‘ರಾಮಾಯಣ’ವನ್ನು ತೆರೆಗೆ ತರಲು ಸಿದ್ಧತೆಗಳು ನಡೆದಿವೆ. ಈ ಮೆಗಾ ಪ್ರಾಜೆಕ್ಟ್‌ಗೆ ರಾಕಿಂಗ್ ಸ್ಟಾರ್ ಯಶ್ ಕೇವಲ ನಟನಾಗಿ ಮಾತ್ರವಲ್ಲದೆ, ಸಹ-ನಿರ್ಮಾಪಕನಾಗಿಯೂ ಕೈಜೋಡಿಸಿರುವುದು ಭಾರತೀಯ ಸಿನಿಪ್ರೇಕ್ಷಕರಲ್ಲಿ ರೋಮಾಂಚನ ಮೂಡಿಸಿದೆ.

‘ರಾಮಾಯಣ’ ಭಾರತದ ಹೆಮ್ಮೆ, ರಾವಣನಾಗಿ ಯಶ್ ದರ್ಬಾರ್!

ದೆಹಲಿಯ ಕಾರ್ಯಕ್ರಮದಲ್ಲಿ ಚಿತ್ರದ ಜರ್ನಿ ಹಾಗೂ ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಯಶ್ ಹಲವು ಸ್ವಾರಸ್ಯಕರ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಯಶ್ ಲಂಕಾಧಿಪತಿ ರಾವಣನ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಪಾತ್ರದ ಗಾಂಭೀರ್ಯ ಮತ್ತು ಸಿದ್ಧತೆಗಳ ಬಗ್ಗೆ ಯಶ್ ವೇದಿಕೆಯಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.‌

ಇದನ್ನೂ ಓದಿ:

ಜಾಗತಿಕ ಮಟ್ಟದಲ್ಲಿ ಭಾರತದ ಕಥೆ:

 “ರಾಮಾಯಣ ಕೇವಲ ಒಂದು ಸಿನಿಮಾವಲ್ಲ, ಇದು ಇಡೀ ಭಾರತದ ಕನಸು ಮತ್ತು ಹೆಮ್ಮೆ. ನಮ್ಮ ದೇಶದ ಕಥೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಸಣ್ಣ ಪ್ರಯತ್ನವಿದು” ಎಂದು ಯಶ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಈ ಸಿನಿಮಾವು ಇದೇ ವರ್ಷ ದೀಪಾವಳಿಯಂದು ರಿಲೀಸ್ ಆಗಲಿದೆ.

ರಾಷ್ಟ್ರ ರಾಜಧಾನಿಯ ವೇದಿಕೆಯಲ್ಲಿ ಹಿಂದಿ ಹಾಗೂ ಇಂಗ್ಲಿಷ್ ಮಾಧ್ಯಮಗಳ ನಡುವೆಯೂ ಕನ್ನಡದ ಧ್ವನಿಯನ್ನು ಮೊಳಗಿಸಿದ ಯಶ್ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !