July 21, 2026
Tuesday, July 21, 2026
spot_img

ಕಸಾಪ ಅಧ್ಯಕ್ಷನಾದರೆ ಕನ್ನಡ ಹೋರಾಟಗಾರರಿಗೆ ಆದ್ಯತೆ: ಡಾ. ಸಿ. ಸೋಮಶೇಖರ

ಹೊಸದಿಗಂತ ವರದಿ ​ಬೆಳಗಾವಿ:

ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷ ಸ್ಥಾನಕ್ಕೆ ತಾವು ಆಯ್ಕೆಯಾದರೆ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಘಟಕಗಳಲ್ಲಿ ಕನ್ನಡ ಪರ ಹೋರಾಟಗಾರರಿಗೆ ಸೂಕ್ತ ಸ್ಥಾನಮಾನ ನೀಡಲು ಬದ್ಧರಾಗಿರುವುದಾಗಿ ಗಡಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಡಾ. ಸಿ. ಸೋಮಶೇಖರ ಅಭಯ ನೀಡಿದ್ದಾರೆ.

ಸೋಮವಾರ ನಗರದ ಖಾಸಗಿ ಹೋಟೆಲ್‌ನಲ್ಲಿ 25ಕ್ಕೂ ಹೆಚ್ಚು ಸಮಾನ ಮನಸ್ಕ ಕನ್ನಡ ಸಂಘಟನೆಗಳ ಸಭೆಯಲ್ಲಿ ಮಾತನಾಡಿದ ಅವರು, “ಕನ್ನಡ ಸಾಹಿತ್ಯ ಪರಿಷತ್ತು ತನ್ನ ಹಿಂದಿನ ಘನತೆಯನ್ನು ಕಳೆದುಕೊಂಡಿರುವುದು ನೋವು ತಂದಿದೆ. ಪರಿಷತ್ತಿನ ಕಳೆದುಹೋದ ಗೌರವವನ್ನು ಮರಳಿ ತರುವ ಉದ್ದೇಶದಿಂದ ಮುಂಬರುವ ನವೆಂಬರ್‌ನಲ್ಲಿ ನಡೆಯಲಿರುವ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ,” ಎಂದು ತಿಳಿಸಿದರು.

ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ, ಜಿಲ್ಲಾಧಿಕಾರಿಯಾಗಿ ಹಾಗೂ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಕನ್ನಡ ಅನುಷ್ಠಾನಕ್ಕಾಗಿ ಕೈಗೊಂಡಿರುವ ಕಾರ್ಯಗಳನ್ನು ಸ್ಮರಿಸಿದ ಅವರು, “ಪರಿಷತ್ತಿನ ಅಧ್ಯಕ್ಷನಾದರೆ ಸಾಮಾನ್ಯ ಕನ್ನಡ ಕಾರ್ಯಕರ್ತನಂತೆ ಕೆಲಸ ಮಾಡುತ್ತೇನೆ,” ಎಂದು ಭರವಸೆ ನೀಡಿದರು.

ಇದನ್ನೂ ಓದಿ:

ಕನ್ನಡ ಭವನ ಕುರಿತು ಸ್ಪಷ್ಟನೆ

ಬೆಳಗಾವಿಯ ನೆಹರೂ ನಗರದಲ್ಲಿರುವ 7 ಕೋಟಿ ವೆಚ್ಚದ ಕನ್ನಡ ಭವನದ ಉಸ್ತುವಾರಿಯನ್ನು ಖಾಸಗಿ ಸಂಘಕ್ಕೆ ನೀಡಲು ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರದ ಕುರಿತು ಎದ್ದಿರುವ ವಿವಾದಕ್ಕೆ ಪ್ರತಿಕ್ರಿಯಿಸಿದ ಡಾ. ಸೋಮಶೇಖರ, “ಕನ್ನಡ ಭವನ ಸರ್ಕಾರದ ಆಸ್ತಿಯಾಗಿದೆ. ನನ್ನ ಸಹಿಯುಳ್ಳ ಪತ್ರವು ಕೇವಲ ಪತ್ರವೇ ಹೊರತು ಆದೇಶವಲ್ಲ. ಅದನ್ನು ಆದೇಶವೆಂದು ಬಿಂಬಿಸಲಾಗುತ್ತಿದೆ. ಈ ಬಗ್ಗೆ ಸರ್ಕಾರಕ್ಕೆ ಶೀಘ್ರದಲ್ಲೇ ಸ್ಪಷ್ಟನೆ ನೀಡುತ್ತೇನೆ,” ಎಂದರು.

ಮಹಾನಗರ ಪಾಲಿಕೆ ಹೋರಾಟಕ್ಕೆ ಬೆಂಬಲ

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರ ಗೊತ್ತುವಳಿ ಅಂಗೀಕರಿಸುವಂತೆ ಕಳೆದ ನಾಲ್ಕು ತಿಂಗಳಿಂದ ಕನ್ನಡ ಸಂಘಟನೆಗಳು ನಡೆಸುತ್ತಿರುವ ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ ಅವರು, ಈ ಸಂಬಂಧ ಗಡಿ ಸಂರಕ್ಷಣಾ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ನಾಗಮೋಹನದಾಸ್ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಬರೆದಿರುವ ಪತ್ರಕ್ಕೂ ತಮ್ಮ ಬೆಂಬಲವಿದೆ ಎಂದು ಹೇಳಿದರು.

ಸಾಹಿತಿಗಳ ವಿರುದ್ಧ ಕನ್ನಡ ಮುಖಂಡರ ಅಸಮಾಧಾನ

ಸಭೆಯಲ್ಲಿ ಮಾತನಾಡಿದ ಕಿತ್ತೂರು ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷ ಮಹಾದೇವ ತಳವಾರ, ಗಡಿನಾಡು ಕನ್ನಡಿಗರ ಸೇನೆಯ ರಾಜ್ಯಾಧ್ಯಕ್ಷ ಬಲರಾಮ ಮಾಸೇನಟ್ಟಿ, ಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷ ಶಿವಾರೆಡ್ಡಿ ಹುಚ್ಚರೆಡ್ಡಿ, ಸರ್ವೋದಯ ಸಂಘದ ಅಧ್ಯಕ್ಷ ಶ್ರೀನಿವಾಸ ತಾಲೂಕರ, ಸಿದ್ದಲಿಂಗಪ್ಪ, ರೇಖಾ ಯಕ್ಕುಂಡಿ, ಎಸ್.ಎಸ್. ಮೂಕನವರ ಹಾಗೂ ಕರವೇ (ಶಿವರಾಮೇಗೌಡ ಬಣ) ಜಿಲ್ಲಾಧ್ಯಕ್ಷ ವಾಜಿದ ಹಿರೆಕೋಡಿ ಅವರು, “ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸಾಹಿತಿಗಳು ಸರ್ಕಾರದ ಪ್ರಶಸ್ತಿ ಮತ್ತು ಹುದ್ದೆಗಳಿಗಷ್ಟೇ ಸೀಮಿತರಾಗದೆ, ಕನ್ನಡ ನಾಡು-ನುಡಿಯ ಹೋರಾಟಗಳಿಗೂ ಧ್ವನಿಯಾಗಬೇಕು,” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಭೆಯ ಆರಂಭದಲ್ಲಿ ಸಾಹಿತಿ ಅಶೋಕ ಮಲಗಲಿ ಸ್ವಾಗತಿಸಿದರು. ಅಶೋಕ ಚಂದರಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಗಡಿ ಭಾಗದೊಂದಿಗೆ ಡಾ. ಸೋಮಶೇಖರ ಅವರಿರುವ ಸುದೀರ್ಘ ಸಂಬಂಧವನ್ನು ವಿವರಿಸಿದರು. ಮುಂದಿನ ದಿನಗಳಲ್ಲಿ ನಾಗನೂರು ರುದ್ರಾಕ್ಷಿ ಮಠದಲ್ಲಿ ಮತ್ತೊಂದು ಸಭೆ ನಡೆಸಿ, ಕಸಾಪ ಚುನಾವಣೆಯಲ್ಲಿ ಬೆಂಬಲ ನೀಡುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಕೊನೆಯಲ್ಲಿ ಅಶೋಕ ಮಲಗಲಿ ವಂದಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !