ಹೊಸದಿಗಂತ ವರದಿ ಬೆಳಗಾವಿ:
ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರವು ರೈತಪರ ಯೋಜನೆಗಳನ್ನು ಸಾಗಹಾಕಿ, ರೈತರ ಹಿತಾಸಕ್ತಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಆರೋಪಿಸಿ ಭಾರತೀಯ ಜನತಾ ಪಾರ್ಟಿಯ ಮುಖಂಡರು ಹಾಗೂ ಕಾರ್ಯಕರ್ತರು ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಿದರು.
ಜಿಲ್ಲೆಯನ್ನು ತಕ್ಷಣವೇ ಬರಪೀಡಿತ ಎಂದು ಘೋಷಿಸುವುದು ಸೇರಿದಂತೆ ವಿವಿಧ ಹಕ್ಕುಒತ್ತಾಯಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ:
ನಗರದ ರಾಣಿ ಚನ್ನಮ್ಮ ವೃತ್ತದಲ್ಲಿ ಜಮಾಯಿಸಿದ ನೂರಾರು ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು, ರಾಜ್ಯ ಸರ್ಕಾರದ ವಿರುದ್ಧ ಸಾಲು ಸಾಲು ಘೋಷಣೆಗಳನ್ನು ಕೂಗಿ ಆಕ್ರೋಶ ಹೋರಹಾಕಿದರು. ಬಳಿಕ ಚೆನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ರ‍್ಯಾಲಿ ಮೆರವಣಿಗೆಯುದ್ದಕ್ಕೂ ಸರ್ಕಾರದ ಕೃಷಿ ವಿರೋಧಿ ನೀತಿಗಳನ್ನು ಖಂಡಿಸುವ ಫಲಕಗಳನ್ನು ಹಿಡಿದು ಕೃಷಿಕರ ಪರ ಧ್ವನಿ ಎತ್ತಿದರು.
ಬಿಜೆಪಿಯ ಪ್ರಮುಖ ಬೇಡಿಕೆಗಳು ಮತ್ತು ಆರೋಪಗಳು ಬರಪೀಡಿತ ಜಿಲ್ಲೆ ಘೋಷಣೆ ಹಾಗೂ ಪರಿಹಾರ:
ಬೆಳಗಾವಿ ಜಿಲ್ಲೆಯಲ್ಲಿ ಮಳೆ ಕೊರತೆಯಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಹೀಗಾಗಿ ತಕ್ಷಣವೇ ಜಿಲ್ಲೆಯನ್ನು ‘ಬರಪೀಡಿತ ಜಿಲ್ಲೆ’ ಎಂದು ಅಧಿಕೃತವಾಗಿ ಘೋಷಿಸಿ, ನಷ್ಟಕ್ಕೊಳಗಾದ ಪ್ರತಿಯೊಬ್ಬ ರೈತನಿಗೂ ಸೂಕ್ತ ಹಾಗೂ ವೈಜ್ಞಾನಿಕ ಪರಿಹಾರ ನೀಡಬೇಕು.
ಅಡೆತಡೆರಹಿತ ವಿದ್ಯುತ್ ಪೂರೈಕೆ:
ಕೃಷಿ ಪಂಪ್‌ಸೆಟ್‌ಗಳಿಗೆ ನಿರಂತರ ಮತ್ತು ಗುಣಮಟ್ಟದ ವಿದ್ಯುತ್ ಪೂರೈಸಬೇಕು. ಯಾವುದೇ ಕಾರಣಕ್ಕೂ ಗ್ರಾಮೀಣ ಭಾಗದಲ್ಲಿ ‘ಲೋಡ್ ಶೆಡ್ಡಿಂಗ್’ ಮಾಡಬಾರದು.
ಕಳಪೆ ಬೀಜ-ಗೊಬ್ಬರ ತಡೆ:
ಬಿತ್ತನೆ ಋತುವಿನಲ್ಲಿ ರೈತರಿಗೆ ಅಗತ್ಯವಿರುವ ಬೀಜ ಮತ್ತು ರಸಗೊಬ್ಬರಗಳನ್ನು ಸಕಾಲಕ್ಕೆ ವಿತರಿಸಬೇಕು. ಮಾರುಕಟ್ಟೆಯಲ್ಲಿ ಹರಿದಾಡುತ್ತಿರುವ ಕಳಪೆ ದರ್ಜೆಯ ಬೀಜ ಮತ್ತು ನಕಲಿ ಗೊಬ್ಬರ ಮಾರಾಟ ಜಾಲಕ್ಕೆ ಕಟ್ಟುನಿಟ್ಟಿನ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ:
ಸ್ಥಗಿತಗೊಂಡ ಯೋಜನೆಗಳ ಮರುಆರಂಭ:
ಈ ಹಿಂದಿನ ಸರ್ಕಾರ ಜಾರಿಗೆ ತಂದಿದ್ದ ‘ರೈತ ವಿದ್ಯಾನಿಧಿ’ ಯೋಜನೆಯನ್ನು ಪುನರಾರಂಭಿಸಬೇಕು.
ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯ ಸರ್ಕಾರ ನೀಡುತ್ತಿದ್ದ ಹೆಚ್ಚುವರಿ 4,000 ಸಹಾಯಧನವನ್ನು ತಕ್ಷಣವೇ ಮರುಪಾವತಿಸಬೇಕು. ಚುನಾವಣಾ ಭರವಸೆಯಂತೆ ಕೃಷಿ ಸಾಲ ಮನ್ನಾವನ್ನು ಸಂಪೂರ್ಣವಾಗಿ ಜಾರಿಗೊಳಿಸಬೇಕು.
ಬರ ನಿರ್ವಹಣೆಯ ವೈಫಲ್ಯ:
ವಿದ್ಯುತ್ ಅಭಾವ ಹಾಗೂ ಟ್ರಾನ್ಸ್‌ಫಾರ್ಮರ್ ದರ ಹೆಚ್ಚಳದಿಂದ ರೈತರು ಕಂಗಾಲಾಗಿದ್ದಾರೆ. ಜೊತೆಗೆ, ಕೆರೆಗಳ ಹೂಳೆತ್ತುವ ಕಾಮಗಾರಿಗಳನ್ನು ಸಂಪೂರ್ಣ ನಿರ್ಲಕ್ಷಿಸಿರುವುದು ಪ್ರಸ್ತುತ ಬರ ಪರಿಸ್ಥಿತಿ ಉಲ್ಬಣಗೊಳ್ಳಲು ಮುಖ್ಯ ಕಾರಣ ಎಂದು ಮುಖಂಡರು ಆರೋಪಿಸಿದರು.
ಯುದ್ಧೋಪಾದಿ ಕ್ರಮಕ್ಕೆ ಆಗ್ರಹ:
ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ತಕ್ಷಣವೇ ಸಕ್ರಿಯಗೊಂಡು ಪರ್ಯಾಯ ಬೆಳೆ ಬೀಜ ವಿತರಣೆ, ಬೆಳೆ ವಿಮೆ ನೊಂದಣಿ, ಹನಿ ನೀರಾವರಿ ತಂತ್ರಜ್ಞಾನ ಪ್ರೋತ್ಸಾಹ, ಮೇವು ಬ್ಯಾಂಕ್ ಸ್ಥಾಪನೆ ಹಾಗೂ ಕುಡಿಯುವ ನೀರಿನ ಯೋಜನೆಗಳನ್ನು ಯುದ್ಧೋಪಾದಿಯಲ್ಲಿ ಜಾರಿಗೊಳಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಬೃಹತ್ ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನರಾದ ಸಂಜಯ ಪಾಟೀಲ, ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ, ಬೆಳಗಾವಿ ಮಹಾನಗರ ಜಿಲ್ಲಾಧ್ಯಕ್ಷೆ ಗೀತಾ ಸುತಾರ, ರಾಜ್ಯ ಮೋರ್ಚಾ ಜಿಲ್ಲಾ ಅಧ್ಯಕ್ಷರಾದ ಜಗದೀಶ್ ಬೋದಿಹಾಳ ಹಾಗೂ ಕಲ್ಲಪ್ಪ ಶಾಮಣಕರ ಸೇರಿದಂತೆ ಹಲವು ಹಿರಿಯ ಮುಖಂಡರು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.



