ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ಕರ್ತವ್ಯದಲ್ಲಿದ್ದ ಮಹಿಳಾ ಸಿಬ್ಬಂದಿಗೆ ಮನೆಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಅನುಚಿತವಾಗಿ ವರ್ತಿಸಿ ಬೆದರಿಕೆ ಹಾಕಿದ್ದ ಯುವಕನ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮೈಸೂರಿನ ನಂಜನಗೂಡಿನ ಮುಳ್ಳೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಹೇಂದ್ರ ಕುಮಾರ್ ಎಂಬಾತನ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ಕರ್ತವ್ಯದಲ್ಲಿ ನಿರತರಾಗಿದ್ದ ಲತಾ ಎಂಬುವರು ನೀಡಿದ ದೂರಿನನ್ವಯ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಜುಲೈ 13ರ ರಾತ್ರಿ ಮದ್ಯಪಾನ ಮಾಡಿ ಲತಾ ಅವರ ಮನೆಗೆ ನುಗ್ಗಿದ ಮಹೇಂದ್ರ ಕುಮಾರ್, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಗ್ರಾಮದ 300 ಜನರ ಮತಗಳನ್ನು ಹಾಳು ಮಾಡಿದ್ದೀಯಾ ಎಂದು ಸುಳ್ಳು ಆರೋಪ ಹೊರಿಸಿ, ಆಕೆಯ ಕೈ ಹಿಡಿದು ಎಳೆದಾಡಿ ಅನುಚಿತವಾಗಿ ವರ್ತಿಸಿದ್ದಾನೆ. ನಮ್ಮ ಊರಿನಲ್ಲಿ ನೀನು ಹೇಗೆ ಕೆಲಸ ಮಾಡ್ತೀಯ ನೋಡ್ತೀನಿ, ನಿನ್ನನ್ನು ಕೆಲಸದಿಂದ ತೆಗೆಸ್ತೀನಿ ಎಂದು ಹೇಳಿರುವುದಾಗಿ ಆರೋಪಿಸಲಾಗಿದೆ.
ಈ ಸಂಬಂಧ ನಂಜನಗೂಡು ತಾಲೂಕಿನ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ಮಹಿಳೆಯ ಮೇಲೆ ದೌರ್ಜನ್ಯ ಎಸಗಿದ ಆರೋಪದಡಿ ಪ್ರಕರಣ ದಾಖಲಾಗಿದೆ.



