ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕಂಬಿ ಎಣಿಸುತ್ತಿರುವ ನಟ ದರ್ಶನ್‌ನನ್ನು ನೋಡಲು ಚಿತ್ರರಂಗದ ಆಪ್ತರು ಹಾಗೂ ಕುಟುಂಬಸ್ಥರು ಜೈಲಿನತ್ತ ಹೆಜ್ಜೆ ಇಡುತ್ತಿದ್ದಾರೆ. ಜೈಲಿನಿಂದ ಹೊರಬರಲು ನಟ ದರ್ಶನ್ ನಡೆಸಿದ ಸಾಲು ಸಾಲು ಜಾಮೀನು ಪ್ರಯತ್ನಗಳು ವ್ಯರ್ಥವಾಗಿರುವ ಬೆನ್ನಲ್ಲೇ, ಇಂದು ನಟಿ ರಕ್ಷಿತಾ ಪ್ರೇಮ್ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕಾರಾಗೃಹಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.
ದರ್ಶನ್ ಸುದೀರ್ಘ ವರ್ಷಗಳ ಆಪ್ತ ಗೆಳತಿಯಾಗಿರುವ ನಟಿ ರಕ್ಷಿತಾ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಮಧ್ಯಾಹ್ನ ನಟಿ ರಕ್ಷಿತಾ ಪ್ರೇಮ್ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಎರಡು ಪ್ರತ್ಯೇಕ ಕಾರುಗಳಲ್ಲಿ ಪರಪ್ಪನ ಅಗ್ರಹಾರ ಜೈಲಿನ ಆವರಣಕ್ಕೆ ಆಗಮಿಸಿದರು. ಜೈಲಿನ ನಿಯಮಾವಳಿಗಳ ಪ್ರಕಾರವೇ ಇಬ್ಬರಿಗೂ ಮುಲಾಕಾತ್ ಕೋಣೆಯಲ್ಲಿ ದರ್ಶನ್‌ನನ್ನು ಭೇಟಿಯಾಗಲು ಅಧಿಕಾರಿಗಳು ಅವಕಾಶ ಕಲ್ಪಿಸಿಕೊಟ್ಟಿದ್ದರು.
ಆಪ್ತ ಸ್ನೇಹಿತರ ಭಾವುಕ ಕ್ಷಣ:
ನಟ ದರ್ಶನ್ ಮತ್ತು ರಕ್ಷಿತಾ ನಡುವೆ ಸ್ಯಾಂಡಲ್‌ವುಡ್‌ನಲ್ಲಿ ಅನೇಕ ವರ್ಷಗಳ ಸುದೀರ್ಘ ಸ್ನೇಹವಿದೆ. ‘ಕಲಾಸಿಪಾಳ್ಯ’ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಜೋಡಿಯಾಗಿ ನಟಿಸಿದ್ದ ಈ ಹಳೇ ಗೆಳೆಯರು ಜೈಲಿನ ಕೋಣೆಯಲ್ಲಿ ಮುಖಾಮುಖಿಯಾದಾಗ ಕೆಲಕಾಲ ಭಾವುಕರಾದರು ಎನ್ನಲಾಗಿದೆ.
ಜಾಮೀನು ಹಿನ್ನಡೆ ಕುರಿತು ಚರ್ಚೆ:
ದರ್ಶನ್‌ನನ್ನು ಜೈಲಿನಿಂದ ಹೊರತರಲು ಕಾನೂನು ತಂಡ ನಡೆಸಿದ ಎಲ್ಲಾ ಪ್ರಯತ್ನಗಳೂ ಸದ್ಯಕ್ಕೆ ವಿಫಲವಾಗಿವೆ. ಈ ಹಿನ್ನೆಲೆಯಲ್ಲಿ ಮುಂದಿನ ಕಾನೂನು ಹೋರಾಟದ ಹಾದಿ ಹೇಗಿರಬೇಕು ಹಾಗೂ ಸದ್ಯದ ದರ್ಶನ್ ಮಾನಸಿಕ ಸ್ಥಿತಿಗೆ ಧೈರ್ಯ ತುಂಬುವ ನಿಟ್ಟಿನಲ್ಲಿ ಪತ್ನಿ ವಿಜಯಲಕ್ಷ್ಮಿ ಮತ್ತು ರಕ್ಷಿತಾ ಸುದೀರ್ಘವಾಗಿ ಸಮಾಲೋಚನೆ ನಡೆಸಿದ್ದಾರೆ.
ಇದನ್ನೂ ಓದಿ:
ಜೈಲಿನಲ್ಲಿ ದರ್ಶನ್ ಜತೆ ನಿಗದಿತ ಸಮಯದವರೆಗೆ ಮಾತುಕತೆ ನಡೆಸಿದ ಬಳಿಕ ಹೊರಬಂದ ನಟಿ ರಕ್ಷಿತಾ ಪ್ರೇಮ್ ಮತ್ತು ಪತ್ನಿ ವಿಜಯಲಕ್ಷ್ಮಿ ಅವರು ಮಾಧ್ಯಮಗಳ ಯಾವುದೇ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡದೆ ಮೌನವಾಗಿ ಜೈಲಿನ ಆವರಣದಿಂದ ಕಾರಿನಲ್ಲಿ ನಿರ್ಗಮಿಸಿದ್ಧಾರೆ..



