ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರು ತಮ್ಮ ಅಧಿಕೃತ ಬ್ಲಾಗ್‌ನಲ್ಲಿ ಶಸ್ತ್ರಚಿಕಿತ್ಸೆ, ಐಸಿಯು ಹಾಗೂ ಆಸ್ಪತ್ರೆಯ ಚಿಕಿತ್ಸೆಯ ಕುರಿತು ಬರೆದುಕೊಂಡಿದ್ದರು. ಇದನ್ನು ಓದಿದ ಕೋಟ್ಯಂತರ ಅಭಿಮಾನಿಗಳು ಬಿಗ್ ಬಿ ಅವರ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಭಾವಿಸಿ ತೀವ್ರ ಆತಂಕಕ್ಕೊಳಗಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಕುರಿತು ವ್ಯಾಪಕ ಚರ್ಚೆಗಳು ಆರಂಭವಾಗಿದ್ದವು.
ವದಂತಿಗಳಿಗೆ ಬ್ರೇಕ್ ಹಾಕಿದ ಅಮಿತಾಬ್
ಸಾಮಾಜಿಕ ಮಾಧ್ಯಮಗಳಲ್ಲಿ ಶಮನವಾಗದ ವದಂತಿಗಳನ್ನು ಕಂಡು ಸ್ವತಃ ಅಮಿತಾಬ್ ಬಚ್ಚನ್ ಅವರೇ ಸತ್ಯಾಂಶವನ್ನು ಬಹಿರಂಗಪಡಿಸಿದ್ದಾರೆ. “ನನಗೆ ಯಾವುದೇ ಆಪರೇಷನ್ ಆಗಿಲ್ಲ, ನನ್ನ ಆರೋಗ್ಯ ಸಂಪೂರ್ಣವಾಗಿ ಚೆನ್ನಾಗಿದೆ. ನನ್ನ ಬರಹವನ್ನು ಜನರು ತಪ್ಪಾಗಿ ಗ್ರಹಿಸಿದ್ದಾರೆ” ಎಂದು ಸ್ಪಷ್ಟಪಡಿಸುವ ಮೂಲಕ ಗೊಂದಲಗಳಿಗೆ ಮುಕ್ತಾಯ ಹಾಡಿದ್ದಾರೆ.
ಪೋಸ್ಟ್‌ನ ನಿಜವಾದ ಉದ್ದೇಶವೇನು?
ತಮ್ಮ ಬರಹದ ಹಿಂದಿನ ನೈಜ ಉದ್ದೇಶವನ್ನು ವಿವರಿಸಿದ ಅವರು, “ಸೋಲಿನ ನಂತರ ಕ್ರೀಡಾಪಟುವೊಬ್ಬ ಹೇಗೆ ಬಲವಾಗಿ ಕಮ್‌ಬ್ಯಾಕ್ ಮಾಡುತ್ತಾನೋ, ಹಾಗೆಯೇ ದೇಹದ ಗಾಯಗಳು ಕಾಲಕ್ರಮೇಣ ಗುಣಮುಖವಾಗುತ್ತವೆ. ಜೀವನದ ಕಷ್ಟಗಳನ್ನು ಮೆಟ್ಟಿ ನಿಂತು ಮುನ್ನುಗ್ಗುವ ಸಂದೇಶ ನೀಡಲು ಆಸ್ಪತ್ರೆಯ ಉದಾಹರಣೆ ನೀಡಿದ್ದೆ” ಎಂದು ಹೇಳಿದ್ದಾರೆ.



