ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಸರಗೋಡು ಜಿಲ್ಲೆಯಲ್ಲಿ ಶಿಗೆಲ್ಲ ಸೋಂಕಿನ ಪ್ರಕರಣಗಳು ದೃಢಪಟ್ಟಿದ್ದು, ನೀಲೇಶ್ವರದ ಚಾತಮಠ ಪ್ರದೇಶದಲ್ಲಿ ನಾಲ್ವರು ಮಕ್ಕಳು ಸೇರಿದಂತೆ ಐವರಿಗೆ ಸೋಂಕು ತಗುಲಿರುವುದು ಆರೋಗ್ಯ ಇಲಾಖೆಯ ಪರೀಕ್ಷೆಯಲ್ಲಿ ಖಚಿತವಾಗಿದೆ.
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸಿದೆ.
ಚಾತಮಠ ಪ್ರದೇಶದಲ್ಲಿ ಜ್ವರ, ಅತಿಸಾರ ಹಾಗೂ ಹೊಟ್ಟೆ ನೋವು ಸೇರಿದಂತೆ ವಿವಿಧ ಸೋಂಕಿನ ಲಕ್ಷಣಗಳಿಂದ ಬಳಲುತ್ತಿದ್ದ ಕೆಲವರ ರಕ್ತ ಹಾಗೂ ಇತರೆ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷಿಸಲಾಗಿತ್ತು. ಪರೀಕ್ಷಾ ವರದಿ ಬಂದ ಬಳಿಕ ಐವರಲ್ಲಿ ಶಿಗೆಲ್ಲ ಸೋಂಕು ಇರುವುದು ದೃಢಪಟ್ಟಿದೆ. ಸೋಂಕಿಗೆ ಒಳಗಾದ ಯುವಕ ಹಾಗೂ ನಾಲ್ವರು ಮಕ್ಕಳಿಗೆ ತಕ್ಷಣ ಚಿಕಿತ್ಸೆ ನೀಡಲಾಗಿದ್ದು, ಎಲ್ಲರೂ ಈಗಾಗಲೇ ಸಂಪೂರ್ಣ ಚೇತರಿಸಿಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಸದ್ಯ ಸೋಂಕು ಹರಡುವ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಸೋಂಕು ಮತ್ತಷ್ಟು ಹರಡದಂತೆ ಆರೋಗ್ಯ ಇಲಾಖೆ ಚಾತಮಠ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ನಿಗಾ ವಹಿಸಿದೆ. ಕುಡಿಯುವ ನೀರಿನ ಗುಣಮಟ್ಟ ಪರಿಶೀಲನೆ, ಆಹಾರ ಸುರಕ್ಷತೆ, ಪರಿಸರ ಸ್ವಚ್ಛತೆ ಮತ್ತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಯಾವುದೇ ವ್ಯಕ್ತಿಯಲ್ಲಿ ತೀವ್ರ ಅತಿಸಾರ, ರಕ್ತ ಮಿಶ್ರಿತ ಮಲ, ಜ್ವರ ಅಥವಾ ಹೊಟ್ಟೆ ನೋವಿನಂತಹ ಲಕ್ಷಣಗಳು ಕಂಡುಬಂದರೆ ಕೂಡಲೇ ಸಮೀಪದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.
ಇದನ್ನೂ ಓದಿ:
ಏನಿದು ಶಿಗೆಲ್ಲ ಸೋಂಕು?
ಶಿಗೆಲ್ಲವು ಬ್ಯಾಕ್ಟೀರಿಯಾದಿಂದ ಉಂಟಾಗುವ ಕರುಳಿನ ಸೋಂಕಾಗಿದೆ. ಇದು ಮುಖ್ಯವಾಗಿ ಕಲುಷಿತ ನೀರು, ಆಹಾರ ಅಥವಾ ಸೋಂಕಿತ ವ್ಯಕ್ತಿಯ ಸಂಪರ್ಕದ ಮೂಲಕ ಹರಡುತ್ತದೆ. ಮಕ್ಕಳಲ್ಲಿ ಈ ಸೋಂಕು ವೇಗವಾಗಿ ಹರಡುವ ಸಾಧ್ಯತೆ ಹೆಚ್ಚಿರುತ್ತದೆ.
ತೀವ್ರ ಅತಿಸಾರ, ರಕ್ತ ಮಿಶ್ರಿತ ಮಲ, ಜ್ವರ, ಹೊಟ್ಟೆ ನೋವು ಮತ್ತು ಸೆಳೆತ, ವಾಂತಿ ಅಥವಾ ವಾಕರಿಕೆ ಇದರ ಲಕ್ಷಣಗಳು. ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಸ್ವಚ್ಛ ನೀರನ್ನು ಮಾತ್ರ ಬಳಸುವುದು, ಕೈಗಳನ್ನು ಆಗಾಗ ಸಾಬೂನಿನಿಂದ ತೊಳೆಯುವುದು, ಆಹಾರವನ್ನು ಶುಚಿಯಾಗಿ ತಯಾರಿಸಿ ಸೇವಿಸುವುದು ಸೇರಿದಂತೆ ವೈಯಕ್ತಿಕ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಮನವಿ ಮಾಡಿದೆ. ಸದ್ಯ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದ್ದು, ಆತಂಕಕ್ಕಿಂತ ಮುನ್ನೆಚ್ಚರಿಕೆ ಮುಖ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



