ಹೊಸದಿಗಂತ ವರದಿ ಚಿತ್ರದುರ್ಗ
ಆದಿಗುರು ಶಂಕರಾಚಾರ್ಯರ ಬಗ್ಗೆ ಅವಹೇಳನವಾಗಿ ಮಾತನಾಡಿ ಅನಗತ್ಯ ವಿವಾದ ಉಂಟು ಮಾಡಿರುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಚಿತ್ರದುರ್ಗ ಬ್ರಾಹ್ಮಣ ಸಂಘ ಹಾಗೂ ಶಾಂಕರ ತತ್ವ ಅಭಿಯಾನ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಕಚೇರಿ ಸಹಾಯಕರ ಮೂಲಕ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಉಡುಪಿಯ ರಾಜಾಂಗಣದಲ್ಲಿ ನಡೆದ ಹರಿಕಥಾ ಕಾಲಕ್ಷೇಪದ ಸಮಾರಂಭದಲ್ಲಿ ಶಂಕರಾಚಾರ್ಯರ ಕುರಿತು ಅವಹೇಳನಕಾರಿಯಾಗಿ ಮಾತನಾಡಿ ಶಂಕರರು ರಚಿಸಿರುವ ಕೃತಿಗಳು ದುಶಾಸ್ತ್ರ ಎಂಬುದಾಗಿ ಸಮಾಜಕ್ಕೆ ತಪ್ಪು ಸಂದೇಶ ನೀಡಿರುವುದನ್ನು ಬ್ರಾಹ್ಮಣರು ಸಹಿಸುವುದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿದಾಡಿರುವುದು ಹಿಂದೂ ಬಾಂಧವರ ಮತ್ತು ಸನಾನತ ಧರ್ಮದ ಸಂಸ್ಥಾಪಕ ಶ್ರೀಮದ್ ಜಗದ್ಗುರು ಶಂಕರಾಚಾರ್ಯರ ಅನುಯಾಯಿಗಳ ಶ್ರದ್ದಾ ಭಕ್ತಿ ನಂಬಿಕೆಗೆ ತೀವ್ರ ಆಘಾತವನ್ನುಂಟು ಮಾಡಿದೆ ಎಂದು ದೂರಿದರು.
ದೈವಾಂಶ ಸಂಭೂತರಾದ ಆಚಾರ್ಯತ್ರಯರು ಸಮಾಜದಲ್ಲಿ ಪರಸ್ಪರ ಸಾಮರಸ್ಯ ಮೂಡಿಸಿದ್ದಾರೆ. ಅವರು ಪ್ರತಿಪಾದಿಸಿದ ಅದ್ವೈತ ತತ್ವವು ಕಲ್ಪಿತವಾದುದಲ್ಲ. ವೇದಶಾಸ್ತ್ರ ಪುರಾಣಗಳಲ್ಲಿ ಪ್ರತಿಪಾದಿತವಾದ ಅದ್ವೈತತ್ವವನ್ನೇ ಪರಮ ಕಾರುಣ್ಯದಿಂದ ನಮಗೆ ತಿಳಿಸಿಕೊಟ್ಟಿದ್ದಾರೆ. ಅಂತಹ ಮಹಾತ್ಮರಿಗೆ ಆಗಿರುವ ನಿಂದನೆ ಧರ್ಮಾಭಿಮಾನಿಗಳ ಭಕ್ತಿಗೆ ಧಕ್ಕೆಯುಂಟಾಗಿದೆ. ಇಂತಹ ಘಟನೆಗಳು ಇನ್ನು ಮುಂದೆ ಮರುಕಳಿಸಬಾರದು ಎಂದು ಬ್ರಾಹ್ಮಣ ಸಂಘದವರು ಒತ್ತಾಯಿಸಿದರು.
ಇದನ್ನೂ ಒದಿ:
ಚಿತ್ರದುರ್ಗ ಬ್ರಾಹ್ಮಣ ಸಂಘದ ಕಾರ್ಯದರ್ಶಿ ಡಿ.ಜಿ.ಪ್ರಾಣೇಶ್‌ರಾವ್, ನಿರ್ದೇಶಕರಾದ ಕೆ.ಹೆಚ್.ಶಂಕರ್, ದಿವಾಕರ್, ರಾಘವೇಂದ್ರ, ಶಾಂಕರ ತತ್ವ ಪ್ರಸಾರ ಅಭಿಯಾನ ಚಿತ್ರದುರ್ಗ ಜಿಲ್ಲಾ ಸಂಚಾಲಕಿ ಉಷ, ತಾಲ್ಲೂಕು ಸಂಚಾಲಕರಾದ ವೆಂಕಟೇಶ್ ದೀಕ್ಷಿತ್, ಜ್ಯೋತಿ, ಚಳ್ಳಕೆರೆ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಅನಂತರಾಮ್ ಗೌತಮ್, ಹೊಸದುರ್ಗ ಬ್ರಾಹ್ಮಣ ಸಂಘದ ಅಧ್ಯಕ್ಷ ಚಂದ್ರಪ್ರಕಾಶ್, ಹಿರಿಯೂರು ಕಾರ್ಯದರ್ಶಿಗಳಾದ ವೆಂಕಟೇಶ್ ದೀಕ್ಷಿತ್, ಅಧ್ಯಕ್ಷ ಸ್ವಾಮಿನಾಥ್, ಪಿ.ನರಸಿಂಹಮೂರ್ತಿ, ಕಾರ್ಯದರ್ಶಿ ಮುರುಳಿಕೃಷ್ಣ, ಚಿತ್ರದುರ್ಗ ಬ್ರಾಹ್ಮಣ ಸಂಘದ ಮಾಜಿ ಅಧ್ಯಕ್ಷರಾದ ಟಿ.ಕೆ.ಚಂದ್ರಶೇಖರರಾವ್. ವಿವಿಧ ಭಜನಾ ಮಂಡಳಿ ಅಧ್ಯಕ್ಷರು, ಸದಸ್ಯರು, ಬ್ರಹ್ಮ ಚೈತನ್ಯ ಮಂಡಳಿಯ ಶಾರದಾ ಸ್ವಾಮಿನಾಥ್ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.



