September 22, 2026
Tuesday, September 22, 2026
spot_img

ರಿಲೀಸ್‌ಗೂ ಮುನ್ನವೇ ಗಿನ್ನೆಸ್ ದಾಖಲೆ ಬರೆದ ಅಲ್ಲು ಅರ್ಜುನ್‌ ನಟನೆಯ ʼರಾಕಾʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸ್ಟಾರ್‌ ಡೈರೆಕ್ಟರ್‌ ಅಟ್ಲೀ ಹಾಗೂ ಅಲ್ಲು ಅರ್ಜುನ್‌ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ರಾಕಾ ಸಿನಿಮಾ ಬಿಡುಗಡೆಗೂ ಮುನ್ನವೇ ಭಾರೀ ಸದ್ದು ಮಾಡುತ್ತಿದೆ.

ಅಂತಿಮ ಹಂತದಲ್ಲಿರುವ ರಾಕಾ ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದೆ. ಈ ಸಿನಿಮಾದ ಹಾಡೊಂದಕ್ಕೆ ಗಿನ್ನೆಸ್‌ ವಿಶ್ವ ದಾಖಲೆಯ ಗರಿ ಸಿಕ್ಕಿದೆ. ಸನ್ ಪಿಕ್ಚರ್ಸ್ ಸಂಸ್ಥೆಯ ಕಲಾನಿಧಿ ಮಾರನ್ ಅವರು ನಿರ್ಮಿಸುತ್ತಿರುವ ಈ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ, ತನ್ನ ತಾಂತ್ರಿಕ ಶ್ರೇಷ್ಠತೆಯಿಂದ ಜಾಗತಿಕ ಗಮನ ಸೆಳೆದಿದೆ.

ನೈಜ ಸಮಯದಲ್ಲಿ ಏಕಕಾಲಕ್ಕೆ ಗರಿಷ್ಠ ಸಂಖ್ಯೆಯ ಕಲಾವಿದರ ಮೋಷನ್-ಕ್ಯಾಪ್ಚರ್ ಎಂಬ ವಿಭಾಗದಲ್ಲಿ ಈ ಐತಿಹಾಸಿಕ ಸಾಧನೆ ಮೂಡಿಬಂದಿದೆ. 2026ರ ಫೆಬ್ರವರಿಯಲ್ಲಿ ನಡೆದ ಪ್ರಕ್ರಿಯೆಯಲ್ಲಿ, ಒಂದೇ ಸೆಷನ್‌ನಲ್ಲಿ ಒಟ್ಟು 37 ಕಲಾವಿದರನ್ನ ರಿಯಲ್-ಟೈಮ್‌ನಲ್ಲಿ ಸೆರೆಹಿಡಿಯಲಾಗಿತ್ತು. ನಾಲ್ಕು ವರ್ಷದ ಮಗುವಿನಿಂದ ಹಿಡಿದು 70 ವರ್ಷದ ಹಿರಿಯ ವೃದ್ಧರವರೆಗಿನ ಕಲಾವಿದರು ಇದರಲ್ಲಿ ಭಾಗವಹಿಸಿದ್ದಾರೆ. ಒಂದೇ ಕ್ಯಾಪ್ಚರ್ ವ್ಯಾಪ್ತಿಯಲ್ಲಿ ಪ್ರತಿಯೊಬ್ಬರ ಮುಖಭಾವ, ದೈಹಿಕ ಭಾಷೆ ಹಾಗೂ ಅಭಿನಯದ ಸೂಕ್ಷ್ಮ ವಿವರಗಳನ್ನ ನೈಜವಾಗಿ ಸೆರೆಹಿಡಿಯುವುದೇ ಕಷ್ಟದ ಕೆಲಸವಾಗಿತ್ತು.

ಈ ಸಾಹಸಕ್ಕಾಗಿ ಸಿನಿಮಾದ ವಿಎಫ್‌ಎಕ್ಸ್ ತಂಡವು ವಿಶೇಷ ವರ್ಕ್‌ಫ್ಲೋ ಮತ್ತು ಮೋಷನ್-ಕ್ಯಾಪ್ಚರ್ ಪೈಪ್‌ಲೈನ್ ಸಿದ್ಧಪಡಿಸಿತ್ತು. ಬರೋಬ್ಬರಿ 92 ಆಪ್ಟಿಕಲ್ ಮೋಷನ್-ಕ್ಯಾಪ್ಚರ್ ಕ್ಯಾಮೆರಾಗಳು, ನಿಖರ ನೆಟ್‌ವರ್ಕಿಂಗ್, ಅನ್‌ರಿಯಲ್ ಎಂಜಿನ್‌ನ ರಿಯಲ್-ಟೈಮ್ ದೃಶ್ಯೀಕರಣ, ವಿಟ್‌ನೆಸ್ ಕ್ಯಾಮೆರಾಗಳು ಹಾಗೂ ಫೇಶಿಯಲ್ ಕ್ಯಾಪ್ಚರ್ ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದ ಅತ್ಯಾಧುನಿಕ ತಾಂತ್ರಿಕ ವ್ಯವಸ್ಥೆಯನ್ನ ಸೆಟ್‌ನಲ್ಲಿ ರೂಪಿಸಲಾಗಿತ್ತು.

2026ರ ಸೆಪ್ಟೆಂಬರ್ 15ರಂದು ʻಗಿನ್ನೆಸ್ ವಿಶ್ವ ದಾಖಲೆʼಯ ಹಿರಿಯ ತೀರ್ಪುಗಾರರಾದ ಸ್ವಪ್ನಿಲ್ ದಂಗ್ರಿಕರ್ ಅವರು ಈ ಸಾಧನೆಯನ್ನ ಅಧಿಕೃತವಾಗಿ ದೃಢೀಕರಿಸಿ, ಹೈದರಾಬಾದ್‌ನಲ್ಲಿ ನಡೆದ ಸಮಾರಂಭದಲ್ಲಿ ನಟ ಅಲ್ಲು ಅರ್ಜುನ್ ಹಾಗೂ ನಿರ್ದೇಶಕ ಅಟ್ಲಿ ಅವರಿಗೆ ಪ್ರಮಾಣಪತ್ರವನ್ನ ಹಸ್ತಾಂತರಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !