September 22, 2026
Tuesday, September 22, 2026
spot_img

ಕೆಪಿಎಸ್‌ಸಿ ಹಗರಣದ ಬೆನ್ನಲ್ಲೇ ಕಚೇರಿ ಮುಚ್ಚುವ ಬಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಚಿಂತನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿ ಪ್ರಕ್ರಿಯೆಯಲ್ಲಿ ಸರಣಿ ಅಕ್ರಮಗಳು ಬಯಲಿಗೆ ಬಂದ ಬೆನ್ನಲ್ಲೇ, ರಾಜ್ಯ ಸರ್ಕಾರವು ಸಂಸ್ಥೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ಹಗರಣಗಳು ಆಡಳಿತಾರೂಢ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು, ಭ್ರಷ್ಟಾಚಾರದ ಆಳವನ್ನು ಕಂಡು ಮುಖ್ಯಮಂತ್ರಿಗಳೇ ಆಘಾತ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಡೀ ಆಯೋಗದ ಕಚೇರಿಯನ್ನೇ ಶಾಶ್ವತವಾಗಿ ಮುಚ್ಚುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ‘ಕೆಪಿಎಸ್‌ಸಿ ಕಚೇರಿಯನ್ನೇ ಸಂಪೂರ್ಣವಾಗಿ ಬಂದ್ ಮಾಡುವ ಬಗ್ಗೆ ನಾವು ಗಂಭೀರವಾಗಿ ಯೋಚಿಸುತ್ತಿದ್ದೇವೆ. ಇದರ ಕಾನೂನು ಸಾಧಕ-ಬಾಧಕಗಳ ಬಗ್ಗೆ ಈಗಾಗಲೇ ತಜ್ಞರೊಂದಿಗೆ ಚರ್ಚೆ ನಡೆಸಲಾಗಿದೆ. ನಾವು ನಂಬಿಕೆಯಿಂದ ಅಧಿಕಾರಿಗಳನ್ನು ನೇಮಕ ಮಾಡಿರುತ್ತೇವೆ. ಆದರೆ, ಜವಾಬ್ದಾರಿಯುತ ಸ್ಥಾನದಲ್ಲಿರುವವರೇ ಈ ರೀತಿ ಭ್ರಷ್ಟಾಚಾರಕ್ಕೆ ಇಳಿದರೆ ಬಡ ಮತ್ತು ಪ್ರತಿಭಾವಂತ ಅಭ್ಯರ್ಥಿಗಳ ಭವಿಷ್ಯ ಏನಾಗಬೇಕು? ಇಂತಹ ಅಕ್ರಮಗಳಿಂದಾಗಿ ಕಷ್ಟಪಟ್ಟು ಓದುವ ಮಕ್ಕಳ ಭವಿಷ್ಯಕ್ಕೆ ದೊಡ್ಡ ಪೆಟ್ಟು ಬೀಳುತ್ತಿದೆ’ ಎಂದು ಆಕ್ರೋಶ ಹೊರಹಾಕಿದ್ದಾರೆ.

ಪಶು ವೈದ್ಯಾಧಿಕಾರಿ ನೇಮಕಾತಿ ಹಗರಣ

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಿಗೆ ಅರ್ಹ ಅಧಿಕಾರಿಗಳನ್ನು ಆಯ್ಕೆ ಮಾಡುವ ಸ್ವಾಯತ್ತ ಸಂಸ್ಥೆಯಾಗಿದ್ದ ಕೆಪಿಎಸ್‌ಸಿ, ಇತ್ತೀಚಿನ ದಿನಗಳಲ್ಲಿ ದಲ್ಲಾಳಿಗಳ ಅಡ್ಡೆಯಾಗಿ ಮಾರ್ಪಟ್ಟಿರುವುದು ತನಿಖೆಯಿಂದ ದೃಢಪಟ್ಟಿದೆ. ವಿಶೇಷವಾಗಿ ಈ ವರ್ಷದ ಆರಂಭದಲ್ಲಿ ನಡೆದಿದ್ದ 400 ಪಶು ವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಯಲ್ಲಿ ಕೋಟ್ಯಂತರ ರೂ.ಗಳ ಡೀಲ್ ನಡೆದಿರುವುದು ಬೆಳಕಿಗೆ ಬಂದಿದೆ.

ಪರೀಕ್ಷೆ ಆರಂಭವಾಗುವ ಮುನ್ನವೇ ಪ್ರಶ್ನೆಪತ್ರಿಕೆ ಮತ್ತು ಕೀ-ಉತ್ತರಗಳನ್ನು ಪೆನ್‌ಡ್ರೈವ್‌ಗಳ ಮೂಲಕ ಸೋರಿಕೆ ಮಾಡಲಾಗಿತ್ತು. ದೇವನಹಳ್ಳಿ ಭಾಗದ ಐಷಾರಾಮಿ ವಿಲ್ಲಾಗಳಲ್ಲಿ ಆಯ್ದ ಅಭ್ಯರ್ಥಿಗಳನ್ನು ಇರಿಸಿ, ಅವರಿಗೆ ಮುಂಚಿತವಾಗಿಯೇ ತರಬೇತಿ ನೀಡಲಾಗಿತ್ತು. ಈ ಹುದ್ದೆಗಳ ಮಾರಾಟಕ್ಕಾಗಿ ಕೋಟಿ ಕೋಟಿ ಹಣ ಪಡೆದಿರುವುದು ತನಿಖೆ ಬಹಿರಂಗಪಡಿಸಿದೆ.

ಪ್ರಭಾವಿ ಅಧಿಕಾರಿಗಳು, ಸದಸ್ಯರ ಬಂಧನ

ಈ ಬೃಹತ್ ಜಾಲದ ತನಿಖೆ ಚುರುಕುಗೊಂಡಿದ್ದು, ಕೆಪಿಎಸ್‌ಸಿಯ ಮಾಜಿ ಪರೀಕ್ಷಾ ನಿಯಂತ್ರಕ ಹಾಗೂ ಅಮಾನತುಗೊಂಡಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಸೇರಿದಂತೆ ಪ್ರಮುಖ ಮಧ್ಯವರ್ತಿ ಕನ್ನಾಳೆಯನ್ನು ಈಗಾಗಲೇ ಬಂಧಿಸಲಾಗಿದೆ. ಇದಲ್ಲದೆ, ದಾವಣಗೆರೆಯಲ್ಲಿರುವ ಕೆಪಿಎಸ್‌ಸಿ ಮಾಜಿ ಸದಸ್ಯೆ ಶಾಂತಾ ಹೊಸಮನಿ ಅವರ ನಿವಾಸದ ಮೇಲೂ ಸಿಐಡಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ:

ರಾಜ್ಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಈ ಪಶುವೈದ್ಯಾಧಿಕಾರಿಗಳ ಹಗರಣದ ಗಂಭೀರತೆಯನ್ನು ಪರಿಗಣಿಸಿರುವ ಕರ್ನಾಟಕ ಹೈಕೋರ್ಟ್, ಇಡೀ ಪ್ರಕರಣದ ತನಿಖಾ ಜವಾಬ್ದಾರಿಯನ್ನು ಈಗ ವಿಶೇಷ ತನಿಖಾ ತಂಡಕ್ಕೆ ಹಸ್ತಾಂತರಿಸಿದೆ. ಎಸ್‌ಐಟಿ ತನಿಖೆ ತೀವ್ರಗೊಳ್ಳುತ್ತಿದ್ದಂತೆ ಆಯೋಗದ ಒಳಗಿರುವ ಇನ್ನುಳಿದ ಪ್ರಭಾವಿಗಳ ಜಾತಕವೂ ಬಯಲಾಗುವ ಭೀತಿ ಎದುರಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !