July 23, 2026
Thursday, July 23, 2026
spot_img

ಸಿಕ್ಕಿಂನಲ್ಲಿ ಭೀಕರ ದುರಂತ: ಸುರಂಗ ಕುಸಿದು 22 ಕಾರ್ಮಿಕರು ಸಾ*ವು, ಮುಂದುವರಿದ ಶೋಧ ಕಾರ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸಿಕ್ಕಿಂನ ನಾಮ್ಚಿ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಎನ್‌ಎಚ್‌ಪಿಸಿ ತೀಸ್ತಾ ಸ್ಟೇಜ್ VI ಜಲವಿದ್ಯುತ್ ಯೋಜನೆಯ ಸುರಂಗ ಕುಸಿತ ದುರಂತದಲ್ಲಿ ಸಾವಿನ ಸಂಖ್ಯೆ ಇಂದು ಗುರುವಾರ 22ಕ್ಕೆ ಏರಿಕೆಯಾಗಿದೆ. ರಕ್ಷಣಾ ಸಿಬ್ಬಂದಿ ಅವಶೇಷಗಳ ಅಡಿಯಿಂದ ಮತ್ತಷ್ಟು ಮೃತದೇಹಗಳನ್ನು ಹೊರತೆಗೆದಿದ್ದಾರೆ.

ಮಿಥೇನ್ ಗ್ಯಾಸ್ ಸ್ಫೋಟದ ಶಂಕೆ

ಕಳೆದ ಸೋಮವಾರ ಸುರಂಗದ ಒಳಗಡೆ ಬಂಡೆಗಳ ನಡುವೆ ಸಿಲುಕಿದ್ದ ಮಿಥೇನ್ ಅನಿಲವು ಹಠಾತ್ತನೆ ಸ್ಫೋಟಗೊಂಡ ಪರಿಣಾಮ ಇಡೀ ಸುರಂಗ ಕುಸಿದು ಬಿದ್ದಿದೆ ಎಂದು ಎನ್‌ಎಚ್‌ಪಿಸಿ ಪ್ರಕಟಣೆಯಲ್ಲಿ ತಿಳಿಸಿದೆ. ಈ ಭೀಕರ ಸ್ಫೋಟದಿಂದಾಗಿ ಸುರಂಗದೊಳಗೆ ದಟ್ಟವಾದ ಹೊಗೆ ಮತ್ತು ವಿಷಕಾರಿ ಅನಿಲ ಆವರಿಸಿಕೊಂಡಿತ್ತು. ದುರಂತ ಸಂಭವಿಸಿದಾಗ ಒಟ್ಟು 25 ಕಾರ್ಮಿಕರು ಒಳಗಡೆ ಸಿಲುಕಿಕೊಂಡಿದ್ದು, ಇನ್ನುಳಿದ ಮೂವರು ನಾಪತ್ತೆಯಾದ ಕಾರ್ಮಿಕರ ಪತ್ತೆಗಾಗಿ ತೀವ್ರ ಶೋಧ ಕಾರ್ಯ ಮುಂದುವರಿದಿದೆ.

ಮೃತರ ಗುರುತು ಪತ್ತೆ

ಬುಧವಾರದವರೆಗೆ ಪತ್ತೆಯಾದ ಮೃತದೇಹಗಳಲ್ಲಿ 8 ಕಾರ್ಮಿಕರ ಗುರುತು ಪತ್ತೆಹಚ್ಚಲಾಗಿದೆ. ಮೃತರ ಪೈಕಿ ನಾಲ್ವರು ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯವರಾಗಿದ್ದರೆ, ಪಂಜಾಬ್, ಉತ್ತರಾಖಂಡ, ಅಸ್ಸಾಂ ಮತ್ತು ಸಿಕ್ಕಿಂನ ತಲಾ ಒಬ್ಬೊಬ್ಬರು ಸೇರಿದ್ದಾರೆ. ಜಾರ್ಖಂಡ್‌ನ ಖುಂಟಿ, ಹಜಾರಿಬಾಗ್ ಮತ್ತು ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಗಳ ಕನಿಷ್ಠ ನಾಲ್ಕು ಕಾರ್ಮಿಕರು ಈ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:

ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಭಾರಿ ಪರಿಹಾರ ಘೋಷಣೆ

ದುರಂತದಲ್ಲಿ ಮಡಿದ ಕಾರ್ಮಿಕರ ಕುಟುಂಬಗಳಿಗೆ ಹಾಗೂ ಗಾಯಾಳುಗಳಿಗೆ ವಿವಿಧ ಹಂತದ ಆರ್ಥಿಕ ಪರಿಹಾರ ಘೋಷಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ 50,000 ರೂ. ಪರಿಹಾರ ಪ್ರಕಟಿಸಿದ್ದಾರೆ. ಹಾಗೆಯೇ ಸಿಕ್ಕಿಂ ಸಿಎಂ ಪ್ರೇಮ್ ಸಿಂಗ್ತಮಾಂಗ್ ಮೃತರ ಕುಟುಂಬಕ್ಕೆ 4 ಲಕ್ಷ ರೂ. ಮತ್ತು ಗಾಯಾಳುಗಳಿಗೆ 50,000 ರೂ. ಘೋಷಣೆ ಮಾಡಿದ್ದಾರೆ ಹಾಗೂ ಎನ್‌ಎಚ್‌ಪಿಸಿ ಮೃತ ಕಾರ್ಮಿಕರ ವಾರಸುದಾರರಿಗೆ ತಲಾ 5 ಲಕ್ಷ ರೂ.ಗಳ ಪರಿಹಾರ ಧನ ಪ್ರಕಟಿಸಿದೆ.

ವಿಶೇಷ ರಕ್ಷಣಾ ಪಡೆಗಳ ಸಿಬ್ಬಂದಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ನಾಪತ್ತೆಯಾಗಿರುವ ಕೊನೆಯ ಮೂವರು ಕಾರ್ಮಿಕರನ್ನು ಪತ್ತೆಹಚ್ಚಲು ಹಗಲಿರುಳು ಕಾರ್ಯಾಚರಣೆ ನಡೆಸುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !